ಕುಕ್ಕೆ ಸುಬ್ರಹ್ಮಣ್ಯ: ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ಸೇವೆ, ಆಶ್ಲೇಷಾ ಬಲಿ ಪೂಜೆ ನೆರವೇರಿಸಿ ಕುಕ್ಕೆಯಿಂದ ನಿರ್ಗಮಿಸಿದ್ದಾರೆ.


ಕ್ಷೇತ್ರಕ್ಕೆ ಮಂಗಳವಾರ ಆಗಮಿಸಿದ್ದ ಕತ್ರಿನಾ ಸರ್ಪ ಸಂಸ್ಕಾರ ಸೇವೆ ನೆರವೇರಿಸಿ, ಅನ್ನಪ್ರಸಾದ ಸ್ವೀಕರಿಸಿ ಖಾಸಗಿ ವಸತಿಗೃಹದಲ್ಲಿ ತಂಗಿದ್ದರು. ಬುಧವಾರ ಬೆಳಗ್ಗೆ ಎರಡನೇ ದಿನದ ಸರ್ಪ ಸಂಸ್ಕಾರ ಸೇವೆ ಹಾಗೂ ಇತರ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು. ಆ ಬಳಿಕ ಆಶ್ಲೇಷಾ ಬಲಿ ಸೇವೆ ನೆರವೇರಿಸಿದರು.


ಮಧ್ಯಾಹ್ನ ಶ್ರೀ ದೇವರ ದರ್ಶನ ಪಡೆದು ಮಹಾಪೂಜೆ ಹಾಗೂ ನಾಗಪ್ರತಿಷ್ಠೆ ಸೇವೆಯಲ್ಲಿ ಪಾಲ್ಗೊಂಡ ಬಳಿಕ ಪ್ರಸಾದ ಸ್ವೀಕರಿಸಿದರು. ಆ ವಸತಿ ಗೃಹಕ್ಕೆ ಹೋಗಿ ಮಂಗಳೂರು ಕಡೆಗೆ ತೆರಳಿದರು. ಎರಡನೇ ದಿನವೂ ಕತ್ರಿನಾ ಅವರು ಮುಖಕ್ಕೆ ಮಾಸ್ಕ್, ತಲೆಗೆ ದುಪ್ಪಟ್ಟ ಧರಿಸಿದ್ದರು.


ಮಾಧ್ಯಮದವರಿಂದ ಅಂತರ ಕಾಯ್ದುಕೊಂಡೇ ಓಡಾಡಿದರು. ವೀಡಿಯೋ ಚಿತ್ರೀಕರಿಸುತ್ತಿದ್ದ ಮಾಧ್ಯಮದವರಲ್ಲಿ ಕತ್ರಿನಾ ಜತೆಗಿದ್ದವರು ವೀಡಿಯೋ ಮಾಡದಂತೆ ತಿಳಿಸಿದರು. ಕತ್ರಿನಾ ಕೈಫ್ ಅವರು ದೇಗುಲದ ಕಚೇರಿಗೂ ಭೇಟಿ ನೀಡದೇ, ದೇಗುಲದ ಗೌರವವನ್ನೂ ಸ್ವೀಕರಿಸದೇ ತೆರಳಿದ್ದಾರೆ ಎನ್ನಲಾಗಿದೆ.


ಸಂತಾನ ಪ್ರಾಪ್ತಿಗಾಗಿ ಸೇವೆ : ಕತ್ರಿನಾ ಕೈಫ್ ಅವರು ಸಂತಾನ ಪ್ರಾಪ್ತಿಗಾಗಿ, ವೃತ್ತಿ ಜೀವನ ಏಳಿಗೆಗೆ, ಕುಟುಂಬದ ಏಳಿಗೆಗಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೇವೆಗಳನ್ನು ನೆರವೇರಿಸಿದ್ದರು. ತಮಿಳು ಚಿತ್ರ ನಿರ್ದೇಶಕರೋರ್ವರ ನಿರ್ದೇಶನದಂತೆ ಕತ್ರಿನಾ ಇಲ್ಲಿಗೆ ಆಗಮಿಸಿದ್ದು, ನಿರ್ದೇಶಕನ ಮ್ಯಾನೇಜರ್ ಹಾಗೂ ಅವರ ಕೆಲವು ಸ್ನೇಹಿತರು ಜತೆಗಿದ್ದರು.