ಕಡಬ ಟೈಮ್, ರಾಮಕುಂಜ: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಡಬ ಮತ್ತು ಕೊೖಲ, ರಾಮಕುಂಜ ಹಾಗೂ ಗೋಳಿತ್ತೊಟ್ಟು ಗ್ರಾ.ಪಂ. ಸಹಯೋಗದಲ್ಲಿ ಕೊಯಿಲ, ರಾಮಕುಂಜ, ಹಳೆನೇರೆಂಕಿ, ಗೋಳಿತ್ತೊಟ್ಟು ಗ್ರಾಮಗಳ ಪಂಚ ಗ್ಯಾರಂಟಿ ಯೋಜನೆಯಡಿ ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಹಾಗೂ ಯುವನಿಧಿ ವಿಶೇಷ ನೋಂದಣೆ ಅಭಿಯಾನ ಮಾ.6ರಂದು ಕೊಯಿಲ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಂಚ ಗ್ಯಾರಂಟಿ ಯೋಜನೆ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿಯವರು ಮಾತನಾಡಿ, ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ ಹಾಗೂ ಯುವನಿಧಿ ಕಡಬ ತಾಲೂಕಿನಲ್ಲಿ ಶೇ.95ರಷ್ಟು ಯಶಸ್ವಿಯಾಗಿದೆ. ಈ ಯೋಜನೆಗಳಿಗೆ ಕಳೆದ ಡಿಸೆಂಬರ್ ತನಕ ಕಡಬ ತಾಲೂಕಿಗೆ 141 ಕೋಟಿ ರೂ. ಅನುದಾನ ಬಂದಿದೆ ಎಂದು ಹೇಳಿದರು.


ತಾಂತ್ರಿಕ ಕಾರಣಗಳಿಂದಾಗಿ ಕೆಲವರಿಗೆ ಯೋಜನೆ ಸಿಗುತ್ತಿಲ್ಲ. ಇದು ಸರಕಾರದಿಂದ ಆಗಿರುವ ಲೋಪವಲ್ಲ. ಈ ಸಮಸ್ಯೆಯನ್ನೂ ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡು ಅರ್ಹರಿಗೆ ಯೋಜನೆಯ ಪ್ರಯೋಜನ ಸಿಗುವಂತೆ ಮಾಡಲಾಗುವುದು ಎಂದು ಹೇಳಿದ ಅವರು, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಮನವಿ ಮೇರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಡಬ ತಾಲೂಕಿನ ಶಿರಾಡಿ, ಉದನೆಯಲ್ಲಿ ವೇಗದೂತ ಬಸ್‌ಗಳ ನಿಲುಗಡೆಗೆ ಆದೇಶವಾಗಿದೆ. ಜನರ ಸಮಸ್ಯೆಗೆ ಅನುಷ್ಠಾನ ಸಮಿತಿ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಅನುಷ್ಠಾನ ಸಮಿತಿ ಸದಸ್ಯರುಗಳಾದ ಗಂಗಾಧರ ಶೆಟ್ಟಿ ಹೊಸಮನೆ , ಎ.ಕೆ.ಬಶೀರ್ ಮಾತನಾಡಿದರು.


ಯುವನಿಧಿ ಯೋಜನೆ ಕುರಿತು ಮಾಹಿತಿ ನೀಡಿದ ಇಲಾಖೆಯ ಅರುಣ್‌ಕುಮಾರ್ ಅವರು, ಯುವ ನಿಧಿ ಯೋಜನೆಯಡಿ ಕಡಬ ತಾಲೂಕಿನಲ್ಲಿ 308 ಅರ್ಜಿಗಳ ನೋಂದಾವಣೆಯಾಗಿದ್ದು ಈ ಪೈಕಿ 227 ಮಂದಿ ಪ್ರಯೋಜನ ಪಡೆದುಕೊಳ್ಳುತ್ತಿದ್ದು 32.86 ಲಕ್ಷ ರೂ.ಅನುದಾನ ಬಂದಿದೆ. ಮುಂದಿನ ದಿನಗಳಲ್ಲಿ ನೆಲ್ಯಾಡಿ, ಸುಬ್ರಹ್ಮಣ್ಯದಲ್ಲಿ ಯುವನಿಧಿ ನೋಂದಾವಣೆ ಶಿಬಿರ ನಡೆಸಲಾಗುವುದು ಎಂದು ಹೇಳಿದರು.


ಫಲಾನುಭವಿಗಳ ಜೊತೆಗೆ ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಸುಭಾಸ್ ಶೆಟ್ಟಿ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು. ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯ ಯತೀಶ್ ಬಾನಡ್ಕ, ಕೊಯಿಲ ಗ್ರಾ.ಪಂ.ಸದಸ್ಯೆ ಸಫಿಯಾ, ನೀತಾ, ಪಂಚ ಗ್ಯಾರಂಟಿ ಯೋಜನೆ ಕಡಬ ತಾಲೂಕು ಅನುಷ್ಠಾನ ಸಮಿತಿ ಸದಸ್ಯರಾದ ಭವಾನಿ ಶಂಕರ್, ಸತೀಶ್ ಇಚ್ಲಂಪಾಡಿ, ಅವಿನಾಶ್ ಬೈತಡ್ಕ, ಹರಿಣಾಕ್ಷಿ, ಜಗದೀಶ್, ಸಿ.ಜೆ.ಸೈಮನ್, ಅಂಗನವಾಡಿ ಮೇಲ್ವಿಚಾರಕಿ ನಂದನಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.