ಕಡಬ ಟೈಮ್, ಪ್ರಮುಖ ಸುದ್ದಿ: ಕಡಬ ಠಾಣಾ ವ್ಯಾಪ್ತಿ ಸಹಿತ ಹಲವು ಗ್ರಾಮೀಣ ಭಾಗಗಳಲ್ಲಿ ಸಂಪ್ರದಾಯದ ಹೆಸರಿನಲ್ಲಿ ಕೋಳಿ ಅಂಕ ಆಯೋಜಿಸಿ ಪ್ರತಿನಿತ್ಯ ಲಕ್ಷಾಂತರ ರೂ. ಮೌಲ್ಯದ ಜೂಜಾಟ ನಡೆಯುತ್ತಿದೆ.


ಎರಡು ದಿನ, ಮೂರು ದಿನ ಹೀಗೆ ಎಡೆಬಿಡದೆ ವಾರ ಪೂರ್ತಿ ಕೋಳಿ ಅಂಕ ನಡೆಯುತ್ತಿದ್ದು, ಯುವ ಸಮುದಾಯ ಈ ಜೂಜಿಗೆ ಬಲಿಯಾಗುತ್ತಿದ್ದಾರೆ. ಕೆಲವು ಕಡೆ ವಿದ್ಯಾರ್ಥಿಗಳೂ ಪಾಲ್ಗೊಳ್ಳುತ್ತಿರುವುದು ಸುದ್ದಿಯಾಗುತ್ತಿದೆ. 100 ರೂ.ನಿಂದ ಆರಂಭವಾಗುವ ಈ ಜೂಜು ಲಕ್ಷ ರೂ.ವರೆಗೂ ನಡೆಯುತ್ತಿದೆ.ಒಂದು ಮಾಹಿತಿಯ ಪ್ರಕಾರ ಒಂದೊಂದು ಕೋಳಿಗಳ ಮೇಲೆ 1ರಿಂದ 5 ಲಕ್ಷ ರೂ.ವರೆಗೂ ಜೂಜು ನಡೆಯುತ್ತಿದೆ. ಹೀಗಾಗಿ ಹಲವು ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ.


ಕಡಬ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ರಾಜರೋಷವಾಗಿ ನಡೆದ ಕೋಳಿ ಅಂಕದ ಸ್ಥಳದಲ್ಲಿ ಮಾತಿನ ಚಕಮಕಿ, ಕೋಳಿಕದ್ದ ಆರೋಪಕ್ಕೆ ಹಲ್ಲೆ, ಕೋಳಿ ಅಂಕದ ಮಾಹಿತಿ ನೀಡಿದವರಿಗೆ ದೈವಕ್ಕೆ ಹರಕೆ ಹೇಳಿದ ಘಟನೆಗಳು,ದಮ್ಕಿ ಹಾಕಿರುವ ವಿದ್ಯಮಾನವೂ ನಡೆದಿವೆ. ಅಲ್ಲದೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದರೆ ಅವರ ಹೆಸರುಗಳೂ ಸಾರ್ವಜನಿಕವಾಗಿ ರಿವೀಲ್ ಆಗುತ್ತಿದೆ.
ಒಂದೋ, ಎರಡೋ ಕಡೆಗಳಲ್ಲಿ ಹಣ ಕಟ್ಟದೆ ಕೋಳಿ ಅಂಕ ನಡೆಸಿದರೆ ಮತ್ತೆ ಬಹುತೇಕ ಜೂಜಾಟವೇ ನಡೆಯುತ್ತದೆ. ಇದರಿಂದಾಗಿ ಹಲವಾರು ವರ್ಷಗಳಿಂದ ಸಂಪ್ರಾದಾಯಿಕವಾಗಿ ನಡೆದುಕೊಂಡು ಬರುತ್ತಿರುವ ಕೋಳಿ ಅಂಕಕ್ಕೂ ತೊಡಕಾಗಿದೆ. ಮಾಹಿತಿಯಂತೆ ಕೋಳಿ ಅಂಕ ಆಯೋಜಿಸುವವರು ಠಾಣೆಗೆ ಭೇಟಿ ನೀಡಿ ಮೌಖಿಕವಾಗಿ ಅನುಮತಿ ಪಡೆಯುತ್ತಾರೆ ಎನ್ನಲಾಗುತ್ತಿದೆ. ಜೊತೆಗೆ ಪ್ರಭಾವಿಗಳು, ಜನಪ್ರತಿನಿಧಿಗಳ ಮೂಲಕವೂ ಒತ್ತಡ ಹೇರಿ ಕೋಳಿ ಅಂಕಕ್ಕೆ ಅನುಮತಿಯನ್ನು ಪಡೆಯುತ್ತಿದ್ದಾರೆ .ಇನ್ನು ಕೆಲವರು ಸ್ಥಳೀಯ ಪೊಲೀಸರಿಂದ ಮೇಲೆ ಇರುವ ಅಧಿಕಾರಿಗಳ ಬಳಿಯೂ ಅನುಮತಿಗಾಗಿ ಅಲೆದಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಮುಂದುವರಿದ ಭಾಗವಾಗಿ ಕೋಳಿ ಅಂಕ ನಡೆಸುವವರು ಪೋಸ್ಟರ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಪ್ರಚಾರ ಮಾಡುತ್ತಿರುವುದು ಕಂಡು ಬಂದಿದೆ.


ಒಂದೆಡೆ ಸಂಪ್ರದಾಯಿಕ ಕೋಳಿ ಅಂಕದವರ ಕೋರಿಕೆ ಇನ್ನೊಂದೆಡೆ ಕೋಳಿ ಅಂಕ ನಡೆಸದಂತೆ ಮೇಲಾಧಿಕಾರಿಗಳು ಹೊರಡಿಸಿರುವ ಆದೇಶ. ಇದರಿಂದ ಸ್ಥಳೀಯ ಪೊಲೀಸರು ಇಕ್ಕಟ್ಟಿಗೆ ಸಿಲುಕುವಂತಾಗಿದೆ. ರಾಜ್ಯದಲ್ಲಿ ಪ್ರತಿನಿತ್ಯ ಕೋಳಿ ಅಂಕದಿಂದ 10 ಸಾವಿರಕ್ಕೂ ಅಧಿಕ ಕೋಳಿಗಳು ಬಲಿಯಾದರೆ, ಇವುಗಳಲ್ಲಿ ಶೇ.60ರಷ್ಟು ಕೋಳಿ ಬಲಿ ಕರಾವಳಿ ಭಾಗದಲ್ಲೇ ನಡೆಯುತ್ತಿದೆ.
ರಾಜ್ಯದಲ್ಲಿ ಆವ್ಯಾಹತವಾಗಿ ಕೋಳಿ ಅಂಕದ ಜೂಜಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ನಿಷೇಧ ಹೇರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಆದೇಶ ಮಾಡಿದ್ದಾರೆ. ರಾಷ್ಟ್ರೀಯ ಪರಿಸರ ಒಕ್ಕೂಟ ಕೋಳಿ ಅಂಕದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದರು.


ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ ಅವರು, ಕೋಳಿ ಅಂಕವು ಪ್ರಾಣಿ ಹಿಂಸೆ ತಡೆ ಕಾಯಿದೆ- 1960 ಕಲಂ-11ರ ಪ್ರಕಾರ ಅಪರಾಧ. ಈ ಕಾಯಿದೆಯನ್ನು ಎಲ್ಲ ಠಾಣಾ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕೆಂದು ಆದೇಶದಲ್ಲಿ ತಿಳಿಸಿದ್ದರು.ಆದರೆ ಈ ಸಂಪ್ರಾದಾಯಿಕ ಕೋಳಿ ಅಂಕಗಳು ಜೂಜಾಟವಾಗಿ ಬದಲಾಗಿದ್ದು ಯುವ ಸಮುದಾಯ ದಾರಿ ತಪ್ಪುತ್ತಿದ್ದಾರೆ, ಹೀಗಾಗಿ ಜೂಜಾಟವನ್ನು ನಿಯಂತ್ರಿಸುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.