ಕಡಬ ಟೈಮ್, ಪ್ರಮುಖ ಸುದ್ದಿ: ಕಡಬ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ನೇಮಕಾತಿ ನಡೆದಿದ್ದು ಉದ್ಯಮಿಯಾಗಿರುವ ಅಭಿಲಾಷ್ ಪಿ.ಕೆ.ಅವರ ನೇಮಕವಾಗಿದೆ. ನೂತನ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಪಕ್ಷದಲ್ಲಿನ ಕೆಲ ಆಕಾಂಕ್ಷಿಗಳು ನಿರಾಸೆಗೊಂಡು ಅಪಸ್ವರ ಎಬ್ಬಿಸಿದ್ದಾರೆ ಎಂದು ತಿಳಿದು ಬಂದಿದೆ.


ನೂತನ ಅಧ್ಯಕ್ಷರ ನೇಮಕದಿಂದ ಅಸಮಾಧಾನಗೊಂಡಿರುವ ಪಕ್ಷದ ಹಿರಿಯ ನಾಯಕರ ಗುಂಪೊಂದು ನೆಲ್ಯಾಡಿಯಲ್ಲಿ ಸಭೆ ಸೇರಿ ಚರ್ಚೆ ನಡೆಸಿದೆ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿಯುತ್ತಿರುವ ಹಿರಿಯರನ್ನು ಕಡೆಗಣಿಸಿ ನೇಮಕ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ .


ಮುಂದುವರಿದ ಭಾಗವಾಗಿ ಪಕ್ಷದ ನಾಯಕರ ಗುಂಪೊಂದು ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದ ಕೆಪಿಸಿಸಿ ಹಿರಿಯ ಉಪಾಧ್ಯಕ್ಷರಾದ ನಾರಾಯಣ ಸ್ವಾಮಿ ಹಾಗೂ ಸುದರ್ಶನ್ ಅವರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನೂತನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪಕ್ಷ ಸಂಘಟನೆ ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.


ಪಕ್ಷದ ಉಸ್ತುವಾರಿ ಜಿ.ಎ.ಬಾವಾ ಅವರು ಕಡಬಕ್ಕೆ ಆಗಮಿಸಿ ಸಭೆ ನಡೆಸಿದ ವೇಳೆ ಆ ಸಭೆಯಲ್ಲಿ 47 ಮಂದಿ ಭಾಗವಹಿಸಿದ್ದರು. ಬಳಿಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕಾರ್ಯಾಧ್ಯಕ್ಷರೊಂದಿಗೆ ಚರ್ಚಿಸಿಯೇ ಈ ನೇಮಕ ಮಾಡಿರುವುದಾಗಿ ಕಡಬ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಸುಧೀರ್ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ಈಗ ಅಧ್ಯಕ್ಷರಾಗಿ ನೇಮಕಗೊಂಡಿರುವ ಅಭಿಲಾಷ್ ಅವರು ಸಮರ್ಥರಿದ್ದಾರೆ.


5 ವರ್ಷದಿಂದ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಅವರ ನೇಮಕದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರ ಸಹಮತವಿದೆ. ಆಕಾಂಕ್ಷಿಗಳಿಗೆ ಬೇಸರವಾಗುವುದು ಸಹಜ. ಮುಂದೆ ಎಲ್ಲವೂ ಸರಿಯಾಗಲಿದೆ ಎಂದಿದ್ದಾರೆ.