ಕಡಬ ಟೈಮ್ಸ್, ಪ್ರಮುಖ ಸುದ್ದಿ :ಇಲ್ಲಿನ ಕೋಡಿಂಬಾಳ ಗ್ರಾಮದ ರಾಮನಗರದಲ್ಲಿರುವ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಹಾಗೂ ಕೊರಗಜ್ಜ ದೈವಸ್ಥಾನದಲ್ಲಿ ಮೂರು ಬಾರಿ ಕಾಣಿಕೆ ಹುಂಡಿಗಳನ್ನು ಒಡೆದು ಕಳ್ಳತನ ಮಾಡಿದರೂ ಕಳ್ಳನ ಪತ್ತೆಯಾಗಿರಲಿಲ್ಲ.




ಗ್ರಾಮದ ಜನರು ಸ್ಥಳೀಯರೇ ಈ ಕೃತ್ಯ ಮಾಡಿದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.ಅಲ್ಲದೆ ಅನುಮಾನದ ಮೇರೆಗೆ ಪೊಲೀಸರು ಸ್ಥಳೀಯ ಕೆಲವರನ್ನು ವಿಚಾರಿಸಿ ಕಳ್ಳತನದ ಜಾಡು ಹಿಡಿಯಲು ಪ್ರಯತ್ನಿಸಿದ್ದರು . ಆಡಳಿತ ಸಮಿತಿಯೂ ಕಳ್ಳನ ಪತ್ತೆಗೆ ದೈವಗಳ ಮುಂದೆ ಪಾರ್ಥನೆ ಸಲ್ಲಿಸಿ ದೈವದ ಮೇಲೆಯೇ ನಂಬಿಕೆ ಇರಿಸಿ ಸತ್ಯವಿದ್ದರೆ ದೈವವೇ ಕಳ್ಳನ ಸುಳಿವು ನೀಡಲಿ ಎಂದು ಹರಿಕೆ ಕೂಡ ಮಾಡಿಕೊಂಡಿದ್ದರು. ಇದೀಗ ನೇಮೋತ್ಸವಕ್ಕೆ ಎರಡು ದಿನ ಇರುವ ಮೊದಲೇ ಕಳ್ಳತನ ಮಾಡಿದಾತ ಸಿಕ್ಕಿಬಿದ್ದಿದ್ದಾನೆ.
ಶಿವರಾತ್ರಿಯ ದಿನ ಫೆ.26 ಸಂಜೆ ಕಡಬ-ಪಂಜ ರಸ್ತೆಯ ಓಂತ್ರಡ್ಕ ಶಾಲಾ ಆವರಣದಲ್ಲಿ ವ್ಯಕ್ತಿಯೋರ್ವ ಹೋಗಿರುವುದನ್ನು ಗಮನಿಸಿ ಹಿಂಬಾಲಿಸಿದ್ದರು. ಈ ವೇಳೆ ಆತನ ಕೈಯಲ್ಲಿ ಕಬ್ಬಿಣ ತುಂಡರಿಸುವ ಬ್ಲೇಡ್ ಮತ್ತು ಮದ್ಯದ ಪ್ಯಾಕೆಟ್ ಇದ್ದುದನ್ನು ಗಮನಿಸಿ ಆತನನ್ನು ಪ್ರಶ್ನಿಸಿದ್ದರು. ಸಮರ್ಪಕ ಉತ್ತರ ನೀಡ ಹಿನ್ನೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದು ಆತನನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಕಾಣಿಯೂರಿನ ನಾವೂರು ಎಂಬಲ್ಲಿನ ಲೋಹಿತ್ ಗೌಡ ಎಂಬುದಾಗಿ ತನ್ನ ಪರಿಚಯ ಹೇಳಿಕೊಂಡಿರುವುದಾಗಿ ತಿಳಿದು ಬಂದಿದೆ. ಅಲ್ಲದೆ ವಿಚಾರಣೆ ವೇಳೆ ಮೂರು ಬಾರಿಯೂ ಕಾಣಿಕೆ ಡಬ್ಬಿ ಹೊಡೆದು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.


ಕುಡಿತದ ಚಟಕ್ಕೆ ಅಂಟಿಕೊಂಡಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಅಲ್ಲಲ್ಲಿ ಶಾಲೆಗಳಲ್ಲಿಯೇ ಆಶ್ರಯ ಪಡೆದು ಕಳ್ಳತನಕ್ಕೆ ಮುಂದಾಗುತ್ತಿದ್ದ ಎಂಬ ಮಾಹಿತಿಯೂ ಲಭಿಸಿದೆ. ಅಲೆಮಾರಿ ಬದುಕು ನಡೆಸುತ್ತ ಹಲವೆಡೆ ಕಳ್ಳತನ ಮಾಡಿ ಕುಟುಂಬಕ್ಕೆ ಮುಜುಗರ ಉಂಟು ಮಾಡಿದ ಕಾರಣ ಮನೆಯವರು ಕೈ ಬಿಟ್ಟಿರುವುದಾಗಿ ತಿಳಿದು ಬಂದಿದೆ. ಈತ ಬೆಳ್ಳಾರೆ ಪರಿಸರದಲ್ಲಿಯೂ ಹಲವಾರು ಕಡೆ ಕಳ್ಳತನ ಮಾಡಿರುವ ಆರೋಪ ಈತನ ಮೇಲಿದೆ.
ಪೊಲೀಸರು ಈತನಿಗೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡಿದ್ದು ಜೊತೆಗೆ ಆತನ ಬೆರಳಚ್ಚು ಪಡೆದುಕೊಂಡಿರುವುದಾಗಿ ಮಾಹಿತಿ ಲಭಿಸಿದೆ. ಈ ಬೆರಳಚ್ಚು ಪಡೆದಿರುವುದರಿಂದ ಇನ್ನು ಬೇರೆ ಕಡೆ ಎಲ್ಲಿ ಕಳ್ಳತನ ಮಾಡಿದರೂ ಈತನ ಕೈವಾಡವಿದ್ದಲ್ಲಿ ಪೊಲೀಸ್ ತನಿಖೆಗೆ ನೆರವಾಗಲಿದೆ.ಅಲ್ಲದೆ ದಂಡಾಧಿಕಾರಿಯವರ ಮೂಲಕ ಈ ಪ್ರದೇಶಕ್ಕೆ ಸುಳಿಯದಂತೆ ಆತನಿಂದ ಬಾಂಡ್ ಬರೆಸಿಕೊಳ್ಳುವ ಪ್ರಕ್ರಿಯೆಯೂ ನಡೆಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮತ್ತೆ ಕಳ್ಳತನ ಮಾಡುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವ ಜನರು: ಮನೆ ಬಿಟ್ಟು ಅಲ್ಲಲ್ಲಿ ಕಳ್ಳತನ ಮಾಡುವುದನ್ನೇ ರೂಢಿಯನ್ನಾಗಿಸಿಕೊಂಡ ಈ ಯುವಕ ಮತ್ತೆ ಕಳ್ಳತನ ಮಾಡುವ ಸಾಧ್ಯತೆ ಹೆಚ್ಚಿದೆ. ಮಾನಸಿಕವಾಗಿ ನೊಂದಂತೆ ಕಂಡರೂ ಕಳ್ಳತನ ಮಾಡುವಲ್ಲಿ ಪರಿಣತಿ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ . ರಸ್ತೆ ಬದಿಯಲ್ಲಿನ ಮನೆಗಳಿಗೆ ನುಗ್ಗಿ ಕಳ್ಳತನ ಜೊತೆಗೆ ಪ್ರಾಣ ಹಾನಿಯಂತಹ ಘಟನೆ ನಡೆದರೆ ಹೊಣೆ ಯಾರು ಎಂದು ಜನರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.ಅತನ ಮನೆಯವರು, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕರದ್ದಾಗಿದೆ.

