ಕಡಬ ಟೈಮ್, ಆಲಂಕಾರು: ಬಸ್ಸಿನಿಂದ ಎಸೆಯಲ್ಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿಯ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿ ಬಳಿಕ ನೀಡದೆ ಇದ್ದ ಕಾರಣ ಬಾಸ್ ಚಾಲಕನ ವಿರುದ್ದ ಪ್ರಕರಣ ದಾಖಲಿಸಿದ ಅಪರೂಪದ ವಿದ್ಯಮಾನವೊಂದು ಕಡಬದಲ್ಲಿ ನಡೆದಿದೆ.




ಬಜತ್ತೂರು ಗ್ರಾಮದ ಕೇಶವ ಮತ್ತು ಅವರ ಪತ್ನಿ , ಮಗಳ ಜೊತೆ ಜ.12ರಂದು ಸಂಬಂಧಿಕರ ಮನೆಗೆ ಬಂದಿದ್ದರು. ವಾಪಾಸು ಮನೆಗೆ ಹೋಗುವ ವೇಳೆ ಆಲಂಕಾರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿಕೊಂಡು ಆಲಂಕಾರು-ಉಪ್ಪಿನಂಗಡಿ ಮಾರ್ಗವಾಗಿ ಹೋಗುತ್ತಿರುವಾಗ ಬಾಕಿಲ ಎಂಬಲ್ಲಿ ಬಸ್ಸಿನ ಹಿಂಬದಿಯ ಬಾಗಿಲನ್ನು ಹಾಕದೆ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಒಮ್ಮೆಲೆ ತಿರುಗಿಸಿದ ಪರಿಣಾಮ ಬಸ್ಸಿನ ಹಿಂಬದಿಯ ಬಾಗಿಲಿನ ಬದಿಯಲ್ಲಿ ನಿಂತಿದ್ದ ಮಗಳು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು.
ಕೂಡಲೇ ಅವರನ್ನು ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಸೇರಿ ಉಪಚರಿಸಿದ್ದರು.ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರಿನ ವೆನಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು.


ಈ ಸಮಯದಲ್ಲಿ ಬಸ್ ಚಾಲಕನು ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿ ಬಳಿಕ ಹೆಚ್ಚಿನ ಚಿಕಿತ್ಸಾ ವೆಚ್ಚ, ತಗುಲುವುದರಿಂದ ಚಿಕಿತ್ಸಾ ವೆಚ್ಚ ಭರಿಸದೇ ಇರುವುದರಿಂದ ಠಾಣೆಗೆ ದೂರು ನೀಡಿದ್ದು ಈ ಅಪಘಾತಕ್ಕೆ ಕಾರಣನಾದ ಬಸ್ ಚಾಲಕ ಅದಿವೆಪ್ಪ ಎಂಬವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಪೊಲೀಸರು THE BHARATIYA NYAYA SANHITA (BNS), 2023 (U/s-281,125(a))ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

