ಕಡಬ ಟೈಮ್, ಸುಬ್ರಹ್ಮಣ್ಯ:ಪೇಟೆ ಪ್ರದೇಶದತ್ತ
ಬಂದಿಂದ ಕಾಡು ಹಂದಿಯೊಂದನ್ನು ಜನರು ಅಟ್ಟಾಡಿಸಿದ ಕಾರಣ ಚಂಚಲಗೊಂಡು ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗಳ
ಮೇಲೆ ದಾಳಿ ಮಾಡಿದ ಘಟನೆ ಗುತ್ತಿಗಾರಿನಿಂದ ವರದಿಯಾಗಿದೆ.




ಗುತ್ತಿಗಾರಿನಿಂದ ಮೊಗ್ರ ಕಡೆಗೆ ಹೋಗುವ ರಸ್ತೆ ಬದಿ ಕಾಡುಹಂದಿ ಬಂದಿದ್ದು ಜನರು ಕಾಡು ಹಂದಿಯನ್ನು
ಹೆದರಿಸಿದ್ದರು.ಇದರಿಂದ ದಿಕ್ಕು ತೋಚದ ಕಾಡುಹಂದಿ ಜನರು ಓಡಾಡುವ ಪ್ರದೆಶದತ್ತ ಬಂದಿದೆ. ಕೆಲವರು ಅದರ
ವೀಡಿಯೋ ಚಿತ್ರೀಕರಣಕ್ಕೆಂದು ಬೆನ್ನು ಬಿದ್ದಿದ್ದು ವಿಚಲಿತಗೊಂಡ ಕಾಡು ಹಂದಿ ಕಾಡು ಸೇರುವ ಭರದಲ್ಲಿ
ಜನರು ಓಡಾಡುವ ಜಾಗದಲ್ಲಿ ಜೀವ ಭಯದಲ್ಲಿ ಓಡಿದೆ.


ಈ ವೇಳೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ. ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಗಾಯಗೊಂಡಿದ್ದು ಅವರನ್ನು ಆ್ಯಂಬುಲೆನ್ಸ್ ಮೂಲಕ ಕರೆದೊಯ್ದು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ.


ಕಾಡು ಪ್ರಾಣಿಗಳು ಜನವಸತಿ ಪ್ರದೇಶದತ್ತ ಬರುವಾಗ ಜನರು ಅವುಗಳಿಗೆ ತೊಂದರೆ ಮಾಡದೆ ಅವುಗಳನ್ನು ರಕ್ಷಿಸಬೇಕು, ಈ ಬಗ್ಗೆ ಅರಣ್ಯ ಇಲಾಖೆ ಅರಿವು ಮೂಡಿಸಬೇಕೆಂಬ ಅಭಿಪ್ರಾಯವನ್ನು ಪರಿಸರ ಪ್ರೇಮಿಗಳು ವ್ಯಕ್ತಪಡಿಸಿದ್ದಾರೆ.