ಕಡಬ ಟೈಮ್ಸ್, ರಾಮಕುಂಜ: ಸಂಚಾರಿ ನಿಯಮ ಪಾಲನೆ ಮಾಡುವುದು ಮತ್ತು ಅದರ ಬಗ್ಗೆ ತಿಳುವಳಿಕೆ ಹೊಂದುವುದು ವಾಹನ ಸವಾರರ ಸಹಿತ ನಾಗರಿಕರ ಕರ್ತವ್ಯವಾಗಿದೆ. ಇಂತಹ ನಿಯಮ ಉಲ್ಲಂಘನೆಯಿಂದ ಅಪಘಾತ, ಜೀವಹಾನಿಯೂ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯೊಂದರ ಮಕ್ಕಳು ರಸ್ತೆ ಬದಿಯಲ್ಲಿ ನಿಂತು ಸಂಚಾರಿ ನಿಯಮ ಪಾಲನೆಯ ಕುರಿತು ಜಾಗೃತಿ ಮೂಡಿಸಿ ಸುದ್ದಿಯಾಗಿದ್ದಾರೆ.




ಕಡಬ ತಾಲೂಕಿನ ಕೊಯಿಲ ಗ್ರಾಮದ ಗಂಡಿಬಾಗಿಲು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈ ಜಾಗೃತಿ ಕಾರ್ಯಕ್ರಮದ ಮೂಲಕ ಸುದ್ದಿಯಾದವರು.
![]() ![]() |
ರಸ್ತೆಯಲ್ಲಿ ಜಾಗೃತಿ ಮೂಡಿಸುತ್ತಿರುವ ವಿದ್ಯಾರ್ಥಿಗಳು(ಕಡಬ ಟೈಮ್) |


ಜ. 17ರ ಮುಂಜಾನೆ ರಸ್ತೆಗೆ ಇಳಿದ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವವರನ್ನು ನಿಲ್ಲಿಸಿ ಅವರಿಗೆ ಸಂಚಾರಿ ನಿಯಮದ ಪಾಠ ಹೇಳಿ, ಅಪಘಾತವನ್ನು ತಪ್ಪಿಸಿ, ಜೀವ ಉಳಿಸಿಕೊಳ್ಳುವ ಬಗ್ಗೆ ಹಿತವಚನ, ಸಲಹೆ ನೀಡಿ ಗಮನ ಸೆಳೆದಿದ್ದಾರೆ. ಅಲ್ಲದೆ ಹೆಲ್ಮೆಟ್ ಧರಿಸಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನೂ ನಿಲ್ಲಿಸಿ ಗುಲಾಬಿ ಹೂ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.


ಕಾರು, ಇತರೇ ವಾಹನದಲ್ಲಿ ಹೋಗುವವರಿಗೆ ಸೀಟ್ ಬೆಲ್ಟ್ ಹಾಕುವಂತೆ, ಟೂರಿಸ್ಟ್ ವಾಹನ ಚಾಲಕರು ಸಮವಸ್ತ್ರ ಧರಿಸದೆ ಇದ್ದವರನ್ನು ಸಮವಸ್ತ್ರ ಹಾಕಿ ಹೋಗುವಂತೆ ತಿಳಿಸಿ, ಸಮವಸ್ತ್ರ ಹಾಕಿಸಿ ಮುಂದಕ್ಕೆ ಚಲಿಸಲು ಅನುವು ಮಾಡಿಕೊಟ್ಟರು. ಸಂಚಾರಿ ನಿಯಮ ಪಾಲಿಸಿದವರಿಗೆ ಗುಲಾಬಿ ಹೂ ನೀಡಿ ಅಭಿನಂದನೆ ಸಲ್ಲಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ತುಳಸಿ, ಶಿಕ್ಷಕಿಯರಾದ ಶ್ರೀಮತಿ ಪೂರ್ಣಿಮಾ, ಶ್ರೀಮತಿ ಚಿತ್ರಾವತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಮೂಲಕ ವಾಹನ ಚಾಲಕರ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.