ಕಡಬ ಟೈಮ್, ಪ್ರಮುಖ ಸುದ್ದಿ: ಗ್ರಾಮೀಣ , ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಟಿಪ್ಪರ್ ಲಾರಿಗಳು ಇತ್ತೀಚಿನ ದಿನಗಳಲ್ಲಿ ಯಮ ಸ್ವರೂಪಿಯಾಗಿ ಬದಲಾಗುತ್ತಿವೆ. ಮರಳು, ಮಣ್ಣು ಸಾಗಿಸುವ ಈ ಟಿಪ್ಪರ್ ಲಾರಿ ಚಾಲಕರು ತುರ್ತು ಸೇವೆಯ ವಾಹನಗಳಿಗಿಂದಲೂ ವೇಗವಾಗಿ ಚಾಲನೆ ಮಾಡುವ ಮೂಲಕ ಇತರ ವಾಹನಗಳಿಗೆ ಅಪಾಯವಾಗಿ ಕಾಡಲಾರಂಭಿಸಿದೆ. ಇದೀಗ ಕಡಬ ಪೇಟೆಯಲ್ಲೂ ಲಂಗು ಲಗಾಮಿಲ್ಲದೆ ಟಿಪ್ಪರ್ ಲಾರಿಗಳು ಓಡಾಟ ಮಾಡುತ್ತಿವೆ.




ಕಡಬ ಪೇಟೆಯಲ್ಲಿ ಯಾವುದೇ ಮುಂಜಾಗೃತಾ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಹಿಂಭಾಗದ ಡೋರ್ ಇಲ್ಲದ ಟಿಪ್ಪರ್ ಲಾರಿಗಳಲ್ಲಿ ಕಳೆದೆರಡು ದಿನಗಳಿಂದ ಮಣ್ಣು ಸಾಗಾಟ ಮಾಡಲಾಗುತ್ತಿದೆ. ಮಣ್ಣು ರಸ್ತೆಯುದ್ದಕ್ಕೂ ಚೆಲ್ಲುತ್ತಾ ವಾಹನ ಸವಾರರಿಗೆ, ಪಾದಚಾರಿ ಸಾರ್ವಜನಿಕರಿಗೆ ತೊಂದರೆ ಕೊಡುವ ಈ ಘನ ಟಿಪ್ಪರ್ ಗಳಿಗೆ ನಿಯಂತ್ರಣ ಹೇರುವುದು ಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.


ವೇಗ
ನಿಯಂತ್ರಕಗಳನ್ನು ಪ್ರತೀ ವಾಹನಗಳಿಗೂ ಅಳವಡಿಸಬೇಕೆಂಬ ಕಾನೂನಿದ್ದರೂ, ಟಿಪ್ಪರ್ ವಾಹನಗಳು ಮಾತ್ರ ಈ ಕಾನೂನನ್ನು ಪಾಲಿಸುತ್ತಿಲ್ಲ
ಎನ್ನುವ ಆರೋಪವಿದೆ. ಪೋಲೀಸ್ ತಪಾಸಣೆಯ ವೇಳೆ ವೇಗ ನಿಯಂತ್ರಕದ ಬಿಲ್ ಗಳನ್ನು ಮಾತ್ರ ಹಾಜರುಪಡಿಸುವ ವ್ಯವಸ್ಥೆಯೂ ಇದ್ದು, ಅವುಗಳನ್ನು ತಮ್ಮ ವಾಹನಗಳಿಗೆ ಅಳವಡಿಸದೆ ಸಾಕಷ್ಟು ಲಾರಿಗಳು ಓಡಾಡುತ್ತಿವೆ.
ರಸ್ತೆಗಳಲ್ಲಿ ಮರಳು, ಮಣ್ಣು ಸಾಗಾಟದ ಸಂದರ್ಭದಲ್ಲಿ ಇವುಗಳಿಗೆ ಹೊದಿಕೆಯನ್ನು ಹಾಕಿ ಕೊಂಡೊಯ್ಯಬೇಕು ಎನ್ನುವ ಕಾನೂನು ನಿಯಮಗಳಿದ್ದರೂ ಈ ವಾಹನಗಳಿಗೆ ಅನ್ವಯಿಸುದ್ದಿಲ್ಲ ಎನ್ನುವ ರೀತಿಯಲ್ಲಿ ಸ್ಪೀಡ್ ಬ್ರೇಕರ್ ಇಲ್ಲದ ಟಿಪ್ಪರ್ ಗಳು ಓಡಾಟ ನಡೆಸುತ್ತಿವೆ. ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಇವುಗಳನ್ನು ನಿಯಂತ್ರಿಸಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

