ಕಡಬ ಟೈಮ್, ರಾಮಕುಂಜ: ಇಲ್ಲಿನ ಗ್ರಾಮದ ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ವಾಸವಿದ್ದ ಸಮಾಜ ಸೇವಕಿ ಭವಾನಿ ಪುತ್ತೂರಾಯ(84ವ.)ಅವರು ಅನಾರೋಗ್ಯಕ್ಕೆ ಒಳಗಾಗಿ ಮಾ.13ರಂದು ಬೆಳಿಗ್ಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ದಿವಂಗತ ರಾಮಚಂದ್ರ ಪುತ್ತೂರಾಯರ ಪತ್ನಿಯಾಗಿದ್ದ ಭವಾನಿ ಪುತ್ತೂರಾಯ ಇವರು ಪುತ್ತೂರು ಸಂಪ್ಯದಲ್ಲಿ ಅನೇಕ ವರ್ಷಗಳ ಕಾಲ ನೆಲೆಸಿ, ಕೆಲವು ವರ್ಷಗಳಿಂದ ತವರುಮನೆ ರಾಮಕುಂಜದ ಪಾದೆ ಎಂಬಲ್ಲಿ ವಾಸವಿದ್ದರು. ಪತಿಯ ನಿಧನದ ಬಳಿಕ ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಸಹಾಯಕರೊಂದಿಗೆ ವಾಸಿಸುತ್ತಿದ್ದರು.




ಪುತ್ತೂರು ರೋಟರಿ, ಲಯನ್ಸ್ , ಮಹಿಳಾ ಸಂಘಟನೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಜನಪ್ರಿಯರಾಗಿದ್ದರು. ಪತಿಯ ಜೊತೆ ಉಪ್ಪಿನಂಗಡಿಯ ಪ್ರೀತಮ್ ಚಲನಚಿತ್ರ ಮಂದಿರ ಮುನ್ನಡೆಸಿ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದರು.


ದೇಹದಾನ: ಭವಾನಿ ಪುತ್ತೂರಾಯ ಅವರ ಇಚ್ಚೆಯಂತೆ ಅವರ ಮೃತದೇಹವನ್ನು ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ . 2 ವರ್ಷದ ಹಿಂದೆ ಮೃತಪಟ್ಟಿದ್ದ ಭವಾನಿ ಪುತ್ತೂರಾಯ ಅವರ ಪತಿ, ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರಾಗಿದ್ದ ದಿ.ರಾಮಚಂದ್ರ ಪುತ್ತೂರಾಯರ ಮೃತದೇಹವನ್ನೂ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿತ್ತು.