ಕಡಬ ಟೈಮ್, ಪ್ರಮುಖ ಸುದ್ದಿ: ಎಡಮಂಗಲ ಗ್ರಾ.ಪಂ ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಇಂಗು ಗುಂಡಿ ನಿರ್ಮಾಣವಾಗಿದ್ದು ಇದರಲ್ಲಿ ಅಕ್ರಮ ನಡೆಡಿರುವ ಆರೋಪ ಕೇಳಿ ಬಂದಿದ್ದು ದ.ಕ ಜಿಲ್ಲೆಯ ಒಂಬುಡ್ಸ್ ಮನ್ ಕಾರ್ಯಾಲಯಕ್ಕೆ ದೂರು ಸಲ್ಲಿಕೆಯಾದ ಹಿನ್ನೆಲೆ ತನಿಖೆಗೆ ಆದೇಶಿಸಿದೆ.


ಎಡಮಂಗಲ ಗ್ರಾ.ಪಂ ವ್ಯಾಪ್ತಿಗೆ ಒಳಪಟ್ಟ ಕಲ್ಲೇಂಬಿ ಪ್ರದೇಶದಲ್ಲಿ 2024-25ನೇ ಸಾಲಿನಲ್ಲಿ ಸುಮಾರು 900 ಇಂಗುಗಳನ್ನು ತೆಗೆಯಲು 3 ಲಕ್ಷ ರೂಪಾಯಿಗಳ ಬಜೆಟ್ ಮಂಜೂರು ಮಾಡಲಾಗಿತ್ತು. ಆದರೆ ಗುಂಡಿಗಳ ಸಂಖ್ಯೆ, ಉದ್ದ ಹಾಗೂ ಅಗಲದಲ್ಲಿ ವ್ಯತ್ಯಾಸಗಳಿದ್ದು, ಕಾಮಗಾರಿ ಗುಣಮಟ್ಟದ ಕುರಿತು ಅಕ್ಷೇಪಿಸಿ ಅನುದಾನದ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ಸಲ್ಲಿಕೆಸಿದ್ದರು.






ದೂರುಗಳ ಆಧಾರದ ಮೇಲೆ ಒಂಬುಡ್ಸ್ಮನ್ ಕಾರ್ಯಾಲಯದ ಎ.ವಿ ನಾಯಕ್ ಅವರು ಜ.24 ರಂದು ಪತ್ರ ಬರೆದು ಏಳು ದಿನದ ಒಳಗೆ ಕಡಬ ತಾಲೂಕು ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿತ್ತು . ಇದರ ಜೊತೆಗೆ ಪುತ್ತೂರು ಉಪ ವಿಭಾಗದ ಪಂಚಾಯತ್ ಇಂಜಿನಿಯರ್ ಇಲಾಖೆಯು ಗ್ರಾ.ಪಂ ಪಿಡಿಒ ಅವರಿಗೆ ಪತ್ರ ಬರೆದು ಫೆಬ್ರವರಿ 27 ರಂದು ಪಂಚಾಯತ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಹಾಜರಿರುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.