ಕಡಬ ಟೈಮ್, ಐತ್ತೂರು: ಇಲ್ಲಿನ ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಓಟೆಕಜೆ ಎಂಬಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಒಂದು ತಿಂಗಳ ಹಿಂದೆ ಆರಂಭವಾಗಿದ್ದು ಸ್ಥಳೀಯರ ದೂರಿನ ಹಿನ್ನೆಲೆ ವಾರದ ಹಿಂದೆ ಸ್ಥಗಿತಗೊಂಡಿದೆ.


ಸರ್ಕಾರಿ ಜಾಗ ಎನ್ನಲಾದ ಸ್ಥಳದಲ್ಲಿ ಮರಗಳನ್ನು ತೆರವುಗೊಳಿಸಿ ಜಾಗವನ್ನು ಸಮತಟ್ಟುಗೊಳಿಸಿ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ಆರಂಭಿಸಿರುವ ಆರೋಪ ಕೇಳಿ ಬಂದಿದೆ . ಕಲ್ಲುಗಳನ್ನು ಬೇರೆ ಕಡೆಗಳಿಗೆ ಸಾಗಿಸುವ ಕಾರ್ಯಗಳು ನಡೆಯುತ್ತಿತ್ತು. ಇನ್ನು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯ ದೂರು ಬಂದ ಹಿನ್ನೆಲೆ ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಥಗಿತಗೊಳಿಸಿದ್ದಾರೆ.


ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನೆಲೆ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು ಮತ್ತೆ ಆರಂಭವಾಗುವ ಮುನ್ಸೂಚನೆ ಇದೆ ಎನ್ನಲಾಗುತ್ತಿದೆ. ಅಧಿಕಾರಿಗಳು ಜಾಗದ ಸರ್ವೆಗೆ ಸೂಚಿಸಿರುವುದಾಗಿ ಮಾಹಿತಿ ಲಭಿಸಿದ್ದು ಅಕ್ರಮ ಕೆಂಪು ಕಲ್ಲಿಗೆ ಸದ್ಯ ಬ್ರೇಕ್ ಬಿದ್ದಂತಾಗಿದೆ.
ಮಾಹಿತಿ ಪ್ರಕಾರ ಸ್ಥಳೀಯ ಗ್ರಾ.ಪಂ ಸದಸ್ಯರೊಬ್ಬರು ತನ್ನ ಪಟ್ಟ ಜಾಗದಲ್ಲಿ 16 ಸೆನ್ಸ್ ಜಾಗ ಗುರುತಿಸಿ ಕಲ್ಲು ಗಣಿಗಾರಿಕೆಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ವಿಪರ್ಯಾಸವೆಂದರೆ ಗುರುತಿಸಿದ ಜಾಗದ ಬದಲಾಗಿ ಸರ್ಕಾರಿ ಜಾಗ ಎನ್ನಲಾದ ಸ್ಥಳವನ್ನು ಅತಿಕ್ರಮಿಸಿ ಅನುಮತಿ ಸಿಗುವ ಮೊದಲೇ ರಾಜಕೀಯ ಪ್ರಭಾವ ಬಳಸಿ ಅನಧಿಕೃತವಾಗಿ ಕೆಂಪು ಕಲ್ಲು ಗಣಿಗಾರಿಕೆಗೆ ಮಾಡಲು ಆರಂಭಿಸಿರುವ ಆರೋಪ ಕೇಳಿ ಬಂದಿದೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾ.ಪಂ ಸದಸ್ಯ ಮನಮೋಹನ್ ಗೊಳ್ಯಾಡಿ ಯವರು ನಮ್ಮ ಪಟ್ಟಾ ಜಾಗದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಮಾಡಲು ಅರ್ಜಿ ಸಲ್ಲಿಸಿದ್ದೇನೆ. ಈಗಾಗಲೇ ಗಣಿ ಇಲಾಖೆಯ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಕಂದಾಯ ಇಲಾಖೆಯ ಅಧಿಕಾರಿಗಳು ನಿರಪೇಕ್ಷಣಾ ಪತ್ರ ನೀಡಿದ್ದಾರೆ.ಅನುಮತಿಯ ನಿರೀಕ್ಷೆಯಲ್ಲಿದ್ದೆವೆ ಎಂದಿದ್ದಾರೆ.
ಈ ಬಗ್ಗೆ ಕಡಬ ಟೈಮ್ಸ್ ಗೆ ಪ್ರತಿಕ್ರಿಯಿಸಿರುವ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಅವರು ಈ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದಿದ್ದಾರೆ. ಇನ್ನು ಕಂದಾಯ ನಿರೀಕ್ಷಕ ಪೃಥ್ವಿರಾಜ್ ಅವರು ಪ್ರತಿಕ್ರಿಯಿಸಿ ಪಟ್ಟಾ ಜಾಗಕ್ಕೆ ಸ್ಥಳ ಪರಿಶೀಲನೆ ನಡೆಸಿ ನಿರಪೇಕ್ಷಣಾ ಪತ್ರ ನೀಡಲು ಇಲಾಖೆಯಿಂದ ಸೂಚಿಸಿದೆ. ಆದ್ರೆ ಸರ್ಕಾರಿ ಜಾಗದಲ್ಲಿ ಗಣಿಗಾರಿಕೆ ನಡೆದಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ. ಗ್ರಾ.ಪಂ ಪಿಡಿಒ ಸುಜಾತ ಅವರು ಪ್ರತಿಕ್ರಿಯಿಸಿ ನಮ್ಮ ಪಂಚಾಯತ್ ನಿಂದ ಯಾವುದೇ ಅನುಮತಿಯ ಪಡೆಯುವ ಅಗತ್ಯವಿಲ್ಲ ಎಂದಿದ್ದಾರೆ.


ಇನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ನಿರ್ದೇಶಕಿ ವಸುಧಾ ಅವರು ಮಾತನಾಡಿ ನನ್ನ ಗಮನಕ್ಕೆ ಬಂದಿಲ್ಲ, ಅರ್ಜಿಯನ್ನು ಕಚೇರಿಗೆ ಸಲ್ಲಿಸರಬಹುದು ಆದರೆ ಯಾವುದೇ ಅನುಮತಿ ನೀಡಿಲ್ಲ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದಿದ್ದಾರೆ.