ಕುಕ್ಕೆ ಸುಬ್ರಹ್ಮಣ್ಯ(KADABA TIMES) :ಆದಾಯಗಳಿಕೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ನಾಗಾರಾಧನೆಯ ಶ್ರದ್ಧಾಕೇಂದ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಲು ಹಲವು ಸಮಯಗಳಿಂದ ಭಾರೀ ಕಸರತ್ತುಗಳು ನಡೆಯುತ್ತಿದ್ದವು.


ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರದ ಹಂತದಲ್ಲಿ ಉತ್ಸುಕತೆ ಹೊಂದಿರುವ ಬಗ್ಗೆ ಮಾಹಿತಿ ಹರಿದಾಡಿತ್ತು. ಈ ಬೆಳವಣಿಗೆ ನಡುವೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಒಂದು ಕಡೆಯಿಂದ ವಿರೋಧ ವ್ಯಕ್ತವಾಗಿತ್ತು. ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಸರ್ಕಾರವು ಎಂದಿನಂತೆ ವ್ಯವಸ್ಥಾಪನಾ ಸಮಿತಿ ರಚನೆಗೆ ಮುಂದಾಗಿತ್ತು.


ಬಳಿಕದ ಬೆಳವಣಿಗೆಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿ ಹಲವಾರು ಆಕಾಂಕ್ಷಿಗಳು ರಾಜ್ಯ ಮಟ್ಟದ ಪ್ರಭಾವಿ ರಾಜಕೀಯ ನಾಯಕರ ಮೂಲಕ ಲಾಬಿ ನಡೆಸುತ್ತಿರುವ ಬಗ್ಗೆಯೂ ಸುದ್ದಿಗಳು ಹರಿದಾಡುತ್ತಿದ್ದವು.


ಇದೀಗ ವ್ಯವಸ್ಥಾಪನಾ ಸಮಿತಿ ಎನ್ನಲಾದ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮೂಲಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ಶೀಘ್ರದಲ್ಲಿಯೇ ರಚನೆಗೊಳ್ಳುವ ಸಂಭವವಿದೆ ಎನ್ನಲಾಗುತ್ತಿದೆ.
ವ್ಯವಸ್ಥಾಪನಾ ಸಮಿತಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಜರಾಯಿ ಸಚಿವ ರಾಮ ಲಿಂಗಾ ರೆಡ್ಡಿ ಅವರಿಗೆ ನೀಡಿದ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


ಈ ಪಟ್ಟಿಯಲ್ಲಿ ಅಶೋಕ್ ನೆಕ್ರಾಜೆ, ಹರೀಶ್ ಇಂಜಾಡಿ, ಎನ್. ಜಯಪ್ರಕಾಶ್ ರೈ , ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಡಾ. ಬಿ ರಘು, ಅಜಿತ್ ಪೂಜಾರಿ ಕಡಬ , ಮಹೇಶ್ ಕುಮಾರ್ ಕರಿಕ್ಕಳ ಹಾಗೂ ಪ್ರಧಾನ ಅರ್ಚಕರ ಹೆಸರುಗಳು ಉಲ್ಲೇಖವಾಗಿದೆ.