ಕಡಬ ಟೈಮ್ಸ್ (KADABA TIMES): ಇಲ್ಲಿಯ ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡೋಳುಕೆರೆ ಎಂಬಲ್ಲಿ ಕಾಡಿನ ಮಧ್ಯೆ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಬಿಟ್ಟುಹೋದ ಘಟನೆ ಇಂದು (ಮಾರ್ಚ್ 22) ಬೆಳಗ್ಗೆ ಬೆಳಕಿಗೆ ಬಂದಿದೆ.


ಮಗುವಿನ ಅಳುವ ಶಬ್ಧ ಕೇಳಿ ಸಾರ್ವಜನಿಕರು ಹೋದಾಗ ಕಾಡಿನಲ್ಲಿ ಮಗು ಪತ್ತೆಯಾಗಿದೆ.ಬೆಳಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡ್ರೊಟ್ಟು ರಸ್ತೆಯ ಕೊಡೋಳುಕೆರೆ ಬಳಿ ಸುತ್ತಮುತ್ತಲಿನ ನಿವಾಸಿಗಳಿಗೂ ದಾರಿಹೋಕ ಮಹಿಳೆಯೊಬ್ಬಳಿಗೂ ಮಗುವಿನ ಅಳುವ ಶಬ್ಧ ಕೇಳಿ, ತಕ್ಷಣವೇ ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಅವರಿಗೆ ಮಾಹಿತಿ ನೀಡಲಾಯಿತು.




ವಿಷಯ ತಿಳಿದ ವಿದ್ಯಾ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಧರ್ಮಸ್ಥಳ ಆರೋಗ್ಯಾಧಿಕಾರಿ ಮಂಜು ಅವರು ಕೂಡಲೇ ಮಗುವಿನ ಆರೋಗ್ಯ ತಪಾಸಣೆ ನಡೆಸಿದ್ದು, ಮಗು ಸಂಪೂರ್ಣ ಆರೋಗ್ಯವಾಗಿರುವುದಾಗಿ ದೃಢಪಡಿಸಿದ್ದಾರೆ. ಹೀಗಾಗಿ ಮಗುವನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಈ ಬಗ್ಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.


ಮಗುವನ್ನು ಯಾರು ಬಿಟ್ಟುಹೋದರು? ಏಕೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಈಗ ನಡೆಯುತ್ತಿದೆ.ಕಾಡಿನಲ್ಲಿ ಮಗು ಪತ್ತೆಯಾಗಿರುವ ಈ ವಿಚಿತ್ರ ಘಟನೆಯು ಹಲವಾರು ಪ್ರಶ್ನೆಗಳನ್ನು ಹುಟ್ಟಿಸಿದೆ.