ಕಡಬ ಟೈಮ್, ಮಂಗಳೂರು: ತುಳು ರಂಗಭೂಮಿ ಹಾಗೂ ತುಳು ಚಿತ್ರರಂಗದಲ್ಲಿ ಕಳೆದ ಕೆಲ ದಶಕಗಳಿಂದ ಕಲಾರಸಿಕರನ್ನು ತನ್ನ ಕುಬ್ಜ ದೇಹದಿಂದಲೇ ರಂಜಿಸುತ್ತಿದ್ದ ಪ್ರಚಂಡ ಕುಳ್ಳ ಖ್ಯಾತಿಯ ವಿವೇಕ್ ಮಾಡೂರು (52 ವ) ಮಾ.14 ರಂದು ಮುಂಜಾನೆ ಹೃದಯಾಘಾತದಿಂದ ಮಾಡೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.


ಮನೆಯ ಶೌಚಾಲಯದಲ್ಲಿ ನಿನ್ನೆ ಬಿದ್ದಿದ್ದ ವಿವೇಕ್ ಅವರು ಆ ಬಳಿಕ ನಿದ್ದೆಗೆ ಜಾರಿ ವಿಶ್ರಾಂತಿ ಪಡೆದಿದ್ದು, ಬೆಳಗ್ಗೆ ಮನೆ ಮಂದಿ ಎಬ್ಬಿಸಲು ಹೋದಾಗ ಮೃತಪಟ್ಟಿದ್ದಾರೆ. ಮೃತ ವಿವೇಕ್ ಅವರು ಪತ್ನಿ ವೇದಾವತಿ ಜೊತೆ ಮಾಡೂರಿನ ಸಹೋದರನ ಮನೆಯಲ್ಲಿ ವಾಸವಾಗಿದ್ದರು.




ಈ ಹಿಂದೆ ಟೆಲಿಫೋನ್ ಎಸ್ ಟಿಡಿ ಬೂತ್ ನಡೆಸುತ್ತಿದ್ದ ವಿವೇಕ್ ಅವರು ಬೂತ್ ಮುಚ್ಚಿದ ಬಳಿಕ ಅಣ್ಣನ ದಿನಸಿ ಅಂಗಡಿಯಲ್ಲೇ ಪ್ಲಾಸ್ಟಿಕ್ ಮನೆ ಬಳಕೆಯ ಸಾಮಾಗ್ರಿಗಳನ್ನು ಮಾರಾಟ ನಡೆಸುತ್ತಿದ್ದರು. ವೃತ್ತಿಪರ ಹಾಸ್ಯ ಕಲಾವಿದರಾಗಿದ್ದ ವಿವೇಕ್ ಅವರು ಕರಾವಳಿಯ ಹೆಸರಾಂತ ನಾಟಕ ತಂಡಗಳಲ್ಲಿ ಅಭಿನಯಿಸಿದ್ದಲ್ಲದೆ, ತುಳು ಚಿತ್ರಗಳಲ್ಲಿ ಕೋಸ್ಟಲ್ ವುಡ್ ಮೇರು ಕಲಾವಿದರೊಂದಿಗೆ ನಟಿಸಿದ್ದಾರೆ .


ತುಳು ನಾಟಕ ಕಲಾವಿದರ ಒಕ್ಕೂಟದಲ್ಲೂ ಅವರು ಸದಸ್ಯರಾಗಿದ್ದರು. ವಿವೇಕ್ ಅವರ ಕಲಾ ಪ್ರಾವೀಣ್ಯತೆಗೆ ಅನೇಕ ಸಂಘ, ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ. ಅವರ ಅಕಾಲಿಕ ಅಗಲಿಕೆಗೆ ತುಳು ರಂಗಭೂಮಿ, ಕೋಸ್ಟಲ್ ವುಡ್ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.