ಕಡಬ ಟೈಮ್, ಪಟ್ಟಣ ಸುದ್ದಿ :ಇಲ್ಲಿನ ಕಡಬ ಪ.ಪಂ ವ್ಯಾಪ್ತಿಯ ಅಡ್ಡಗದ್ದೆ ಸಮೀಪದ ಸರ್ಕಾರಿ ಕಾಲೇಜಿಗೆ ಹೋಗುವ ವೃತ್ತದಲ್ಲಿ ಯೂತ್ ಕ್ಲಬ್ ದೊಡ್ಡ ಕೊಪ್ಪ ಸಂಘಟನೆಯು ಮಾ.11ರಂದು ಮಾರ್ಗಸೂಚಿ ಫಲಕ ಅಳವಡಿಸಿದೆ.


ಕಡಬ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ನಾಯಕ್ ಅವರು ಈ ಸೂಚನಾ ಫಲಕವನ್ನು ಅನಾವರಣ ಗೊಳಿಸಿ ಎಡಮಂಗಲ ರಸ್ತೆ ಮತ್ತು ದೊಡ್ಡಕೊಪ್ಪ ಭಾಗಕ್ಕೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ, ಸಂಘಟನೆಯ ಈ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು.




ಯೂತ್ ಕ್ಲಬ್ ನ ಅಧ್ಯಕ್ಷ ಶ್ರೀಕಾಂತ್ ಅವರು ಮಾತನಾಡಿ ,ಇತ್ತೀಚೆಗೆ ಎಡಮಂಗಲಕ್ಕೆ ಸೇತುವೆ ನಿರ್ಮಾಣವಾಗಿದ್ದು ಈ ರಸ್ತೆ ಮೂಲಕ ಹಾದು ಹೋಗುವ ಹಲವಾರು ಪ್ರಯಾಣಿಕರು ಮಾರ್ಗಸೂಚಿ ಇಲ್ಲದೆ ದೊಡ್ಡ ಕೊಪ್ಪಕ್ಕೆ ಬರುವುದನ್ನು ಗಮನಿಸಿ ಈ ನಾಮಫಲಕ ಅಳವಡಿಸಲಾಗಿದೆ ಎಂದರು.


ಈ ಸಂದರ್ಭದಲ್ಲಿ ಸಿಎ ಬ್ಯಾಂಕ್ ನ ಉಪಾಧ್ಯಕ್ಷ ಗಿರೀಶ್ ಎ.ಪಿ , ಕುಂಬಾರ ಸೇವಾ ಸಂಘದ ಅಧ್ಯಕ್ಷ ಕುಞ್ಞಣ್ಣ, ಗ್ರಾ.ಪಂ ಮಾಜಿ ಸದಸ್ಯ ಮಾಧವ ಕುಂಬಾರ , ಪ್ರಕಾಶ್ ಎನ್.ಕೆ , ಜಿನಿತ್ ಮರ್ದಾಳ, ಸೋಮಪ್ಪ ಗೌಡ ಪಟ್ನ , ಆನಂದ ಪಿಜಕ್ಕಳ ಸೇರಿದಂತೆ ಸ್ಥಳೀಯರು ಹಾಜರಿದ್ದರು. ಸಂಘಟನೆಯ ಕಾರ್ಯದರ್ಶಿ ಸಂತೋಷ ಪಿ ಸ್ವಾಗತಿಸಿ, ಕುಂಬಾರ ಸಂಘದ ಕಾರ್ಯದರ್ಶಿ ಲಿಂಗಪ್ಪ ಜೆ ವಂದಿಸಿದರು.