ಕಡಬ ಟೈಮ್ಸ್,ಎಡಮಂಗಲ: ಎಡಮಂಗಲ ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಫೆ.28 ರಂದು ಗ್ರಾ.ಪಂ ಸಭಾಭವನದಲ್ಲಿ ಗ್ರಾ.ಪಂ ಅಧ್ಯಕ್ಷ ರಾಮಣ್ಣ ಜಾಲ್ತಾರು ಅಧ್ಯಕ್ಷತೆಯಲ್ಲಿ ನಡೆದಿದ್ದು ಬೆರಳೆಣಿಕೆಯ ಗ್ರಾಮಸ್ಥರು ಭಾಗವಹಿಸಿರುವುದರಿಂದ ನಿರ್ಣಯ ಕೈಗೊಳ್ಳಲು ಆಕ್ಷೇಪ ವ್ಯಕ್ತವಾದ ವಿದ್ಯಮಾನ ನಡೆದಿದೆ.


ಎಡಮಂಗಲ ಗ್ರಾಮದಲ್ಲಿ 1248ಮನೆಯಿದ್ದು ಎಣ್ಮೂರು ಗ್ರಾಮದಲ್ಲಿ 535ಮನೆ ಇವೆ. ಈ ಉಭಯ ಗ್ರಾಮಗಳಿಂದ ಭಾಗವಹಿಸಿದ್ದು ಒಟ್ಟು 13 ಜನರು ಮಾತ್ರ.


ಕಳೆದ ಗ್ರಾಮ ಸಭೆಯಲ್ಲಿ ಅಧಿಕಾರಿಗಳು ಸರಿಯಾಗಿ ಇರಲಿಲ್ಲ, ಈ ಬಾರಿ ಜನರೇ ಇಲ್ಲ. ಜನರಿಗೆ ಮಾಹಿತಿ ನೀಡಲ್ಲವೆ ಎಂದು ಸಭೆಯಲ್ಲಿದ್ದವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಜಾತ್ರೋತ್ಸವದ ಸಂದರ್ಭ ಧ್ವನಿವರ್ದಕದ ಮೂಲಕ ಮಾಹಿತಿ ತಿಳಿಸಲಾಗಿದೆ ಎಂದರು.
ಗ್ರಾಮಸ್ಥರಾದ ಗಿರೀಶ್ ನಡುಬೈಲ್ ಅವರು ಸಭೆಯಲ್ಲಿ ರೈಲ್ವೆ ಮೇಲ್ಸೇತುವೆ ಬಗ್ಗೆ ಆಗದಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಈ ಬಗ್ಗೆ ಸಂಬಂಧಿಸಿದವರಿಗೆ ಪತ್ರ ಬರೆಯಲಾಗುವುದು ಎಂದರು. ಇದರ ಜೊತೆಗೆ ಬೆಳೆ ಸಮೀಕ್ಷೆಗೆ ಮಾಡುವ ಸಂದರ್ಭದಲ್ಲಿ ನಡುಬೈಲ್ ನವರಿಗೆ ಸಮಸ್ಯೆ ಎದುರಾಗುತ್ತಿದೆ, ಸೇನೆರೆ ಕಾಡು ಪ್ರದೇಶ ತೋರಿಸುತ್ತಿದೆ ಸರಿಪಡಿಸಬೇಕೆಂದು ಒತ್ತಾಯಿಸಿದರು.


ಮತ್ತೋರ್ವ ಗ್ರಾಮಸ್ಥ ಪದ್ಮನಾಭ ಪುಳಿಕುಕ್ಕು ಅವರು ಸಭೆಯಲ್ಲಿ ಮಾತನಾಡಿ ಉದ್ಯೋಗ ಖಾತರೀ ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ , ಬಸವಕಲ್ಯಾಣ ಯೋಜನೆಯಲ್ಲಿ ಮನೆ ಹಂಚಿಕೆ,ಸೋಲಾರ್ ರಾತ್ರಿ 11 ಗಂಟೆಯ ವರೆಗೆ ಮಾತ್ರ ಉರಿಯುವ ಬಗ್ಗೆ, ಸ್ಮಶಾನ ನಿರ್ಮಾಣದ ವಿಳಂಬ, ಮನೆ ತೆರಿಗೆಯ ಕುರಿತು ಸರ್ವೆ ಕುರಿತಾಗಿ ಪ್ರಶ್ನಿಸಿದರು.
ಎಡಮಂಗಲ ಸೇತುವೆ ನಿರ್ಮಾಣ ವಿಳಂಬ: ಜನವರಿ 2 ರಂದು ಭೂಮಿಪೂಜೆ ನಡೆದರೂ ಇನ್ನೂ ಕೆಲಸ ಆರಂಭವಾಗಿಲ್ಲ. ಇನ್ನೂ ಒಂದುವರೆ ತಿಂಗಳಲ್ಲಿ ಮಳೆ ಪ್ರಾರಂಭವಾಗುತ್ತದೆ ,ಗುತ್ತಿಗೆದಾರರು ವಿಳಂಬ ಮಾಡುತ್ತಿರುವ ಬಗ್ಗೆ ಸ್ಪಷ್ಟನೆ ಬೇಕಾಗಿದೆ. ನಿಮ್ಮದೇ ಪಕ್ಷದ ಎಂಎಲ್ಎ ಇರುವುದು ನಿಮ್ಮವರೇ ಆಯ್ಕೆ ಮಾಡಿದ ಗುತ್ತಿಗೆದಾರರು ಯಾಕೆ ವಿಳಂಬ ಮಾಡುತ್ತಿದ್ದಾರೆ ಕಾಮಗಾರಿಯಲ್ಲಿ ಪರ್ಸಂಟೇಜ್ ವ್ಯವಹಾರ ಬೇಕಾಗಿ ವಿಳಂಬವೇ ಎಂದು ಪದ್ಮನಾಭ ಎಂಬವರು ಖಾರವಾಗಿಯೇ ಪ್ರಶ್ನಿಸಿದರು.ಅಲ್ಲದೆ ಪಂಚಾಯಿತಿಯಿಂದ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದಕ್ಕೆ ಶೀಘ್ರವಾಗಿ ಕಾಮಗಾರಿ ಆರಂಭಿಸಲು ಸೂಚಿಸುವುದಾಗಿ ಅಧ್ಯಕ್ಷರು ಸಮಜಾಯಿಸಿ ಉತ್ತರ ನೀಡಿದರು.


ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿ ಮೆಸ್ಕಾಂ ಕಡಬ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಭಾಗವಹಿಸಿದ್ದರು.ಗ್ರಾ,ಪಂ ಪಿಡಿಒ ಶ್ರೀಮತಿ ಭವ್ಯ ಎಂ ಬಿ , ಗ್ರಾಮ ಸದಸ್ಯರು ಹಾಜರಿದ್ದರು.