ಕಡಬ ಟೈಮ್, ಪ್ರಮುಖ ಸುದ್ದಿ: ಬ್ಯಾಂಕ್ ಗಳ ವ್ಯವಹಾರ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗೆ ದೇಶದ ಬ್ಯಾಂಕಿಂಗ್ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಭಾರತೀಯ ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘಟನೆಯಿಂದ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾದ ʻಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ – 2024ʼ (ಅತ್ಯುತ್ತಮ ಸಂಸ್ಥೆ ಹಾಗೂ ವಿಶೇಷ ಅಂಗೀಕಾರ ಪ್ರಶಸ್ತಿ) ಲಭಿಸಿದೆ.


ಕೇಂದ್ರ ಹಣಕಾಸು ರಾಜ್ಯ ಸಚಿದ ಪಂಕಜ್ ಚೌದರಿ ಅವರು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ʻಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ – 2024ʼ ಅನ್ನು ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಶೀನಪ್ಪ ಎಂ. ಮತ್ತು ಬಿ.ಸಿ.ವಿಭಾಗದ ನಿರ್ದೇಶಕ ಪ್ರವೀಣ್ ಎಂ.ಸಿ. ಸ್ವೀಕರಿಸಿದರು.


ಈ ಪ್ರಶಸ್ತಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಹಾಗೂ ಖಾಸಗಿ ಬ್ಯಾಂಕ್ ಗಳು , ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸೇರಿದಂತೆ ದೇಶದ ಇಪ್ಪತ್ತು ಪ್ರತಿಷ್ಠಿತ ಸಂಸ್ಥೆಗಳು ಭಾಜನವಾಗಿವೆ.


ದೇಶದ ಎಲ್ಲಾ ಗ್ರಾಮಗಳಲ್ಲಿ ಬ್ಯಾಂಕ್ಗಳು ತಮ್ಮ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆ ನೀಡುವುದು ಅಸಾಧ್ಯವಾಗಿರುವುದರಿಂದ ವಿತ್ತ ಸಚಿವಾಲಯ ಹಾಗೂ ದೇಶದ ಆರ್ಥಿಕ ನಿಯಂತ್ರಕ ಸಂಸ್ಥೆಗಳು ಆರ್ಥಿಕ ಸೇರ್ಪಡೆ ಕಾರ್ಯಕ್ರಮದಡಿ ವ್ಯಕ್ತಿಗತ ಹಾಗೂ ಆಯ್ದ ಸಂಸ್ಥೆಗಳನ್ನು ಬಿ.ಸಿ. ಅಥವಾ ಬ್ಯಾಂಕ್ ಗಳ ವ್ಯವಹಾರ ಪ್ರತಿನಿಧಿಗಳನ್ನಾಗಿ ನಿಯೋಜಿಸಿಕೊಂಡಿದೆ.


ಸಿಡ್ಬಿ ಬ್ಯಾಂಕ್ನ ಪ್ರಯಾಸ್ ಕಾರ್ಯಕ್ರಮವನ್ನು ಗ್ರಾಮಾಭಿವೃದ್ಧಿ ಯೋಜನೆಯು ಅನುಷ್ಠಾನ ಮಾಡುತ್ತಿದ್ದು, ಕಿರು ಉದ್ಯಮವನ್ನು ಆರಂಭಿಸಲು ಅತೀ ಕಡಿಮೆ ಬಡ್ಡಿದರದಲ್ಲಿ ಗರಿಷ್ಠಮೊತ್ತದ ಸಾಲವನ್ನು ಸಿಡ್ಬಿಯಿಂದ ನೇರವಾಗಿ ಸ್ವ-ಉದ್ಯೋಗ ಘಟಕವನ್ನು ಪ್ರಾರಂಭಿಸುವ ಸದಸ್ಯರಿಗೆ ದೊರಕಿಸಿಕೊಡಲಾಗುತ್ತಿದೆ. 56,057 ಸದಸ್ಯರಿಗೆ ಸಿಡ್ಬಿ ಪ್ರಯಾಸ್ ಕಾರ್ಯಕ್ರಮದ ಮೂಲಕ ರೂ. 1,971 ಕೋಟಿ ಮೊತ್ತದ ಸಾಲ ಸೌಲಭ್ಯಗಳನ್ನು ಒದಗಿಸಲಾಗಿದೆ.