ಕಡಬ ಟೈಮ್ಸ್, ಕಡಬ: ಕಡಬ- ಪಂಜ ಪ್ರಮುಖ ಜಿಲ್ಲಾ ರಸ್ತೆಯಲ್ಲಿ ಮರಣ ಗುಂಡಿಗಳು ಸೃಷ್ಟಿಯಾಗಿ ವಾಹನ ಸವಾರರು ನಿತ್ಯ ಪರದಾಟ ಮಾಡುತ್ತಿದ್ದಾರೆ . ರಸ್ತೆಯ ಗುಂಡಿಗಳಿಗೆ ಡಾಮಾರು ಹಾಕಿ ತೇಪೆ ಹಾಕುವ ಕಾರ್ಯಕ್ಕೆ ಮುಂದಾದ ವೇಳೆ ಗಿ ಸ್ಥಳದಲ್ಲಿ ಬರೇ ಕಾರ್ಮಿಕರು ಅರೆ ಬರೆ ಕೆಲಸ ಮಾಡುತ್ತಿರುವುದಾಗಿ ಆರೋಪಿಸಿ ಆ ಭಾಗದ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಹಿನ್ನೆಲೆ ಕೆಲಸ ಸ್ಥಗಿತವಾಗಿತ್ತು .


ಇದೀಗ ಕಡಬ-ಪಂಜ ರಸ್ತೆಯ ಮರುಡಾಮರೀಕರಣದ ಪ್ರಕ್ರಿಯೆ ತ್ವರಿತವಾಗಿ ಮಾಡುವಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಇಂಜಿನಿಯರ್ಸ್ ಗಳಿಗೆ ಸೂಚನೆ ನೀಡಿದ್ದಾರೆ. ಮಂಗಳೂರಿನ ಸರ್ಕಿಟ್ ಹೌಸ್ ನಲ್ಲಿ ಸಚಿವರನ್ನು ಭೇಟಿಯಾದ ಮಾಜಿ ಜಿ.ಪಂ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಅವರು ಕಡಬ- ಕೋಡಿಂಬಾಳ ಪಂಜ ರಸ್ತೆಯು ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದರೂ ಹಲವಾರು ವರ್ಷಗಳಿಂದ ಡಾಮರೀಕರಣವಾಗದೇ ರಸ್ತೆಗಳು ಗುಂಡಿ ಬಿದ್ದಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿರುವುದರಿಂದ ತಕ್ಷಣ 1 ಕೋಟಿ ಅನುದಾನ ನೀಡಿ ಡಾಮರೀಕರಣ ಗೊಳಿಸಿ ಉಪಯೋಗಗೊಳಿಸುವಂತೆ ಮನವಿ ನೀಡಿದ್ದರು.




ಈ ಸಂದರ್ಭದಲ್ಲಿ ಅಧಿಕಾರಿಗಳು ಈಗಾಗಲೇ ಈ ರಸ್ತೆಗೆ ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಮಾಹಿತಿ ನೀಡಿದರು . ಈ ವೇಳೆ ಸಚಿವರು ಕಾಮಗಾರಿ ವಿಳಂಬ ಆಗಿರುವ ಬಗ್ಗೆ ಚರ್ಚಿಸಿ ರಸ್ತೆ ಡಾಮರೀಕರಣ ಪ್ರಕ್ರಿಯೆ ತ್ವರಿತವಾಗಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಈ ಬಗ್ಗೆ ಕಡಬ ಟೈಮ್ಸ್ ಗೆ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಇಲಾಖೆ ಸುಳ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋಪಾಲ್ ಅವರು ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ, ಶೀಘ್ರದಲ್ಲಿ ಕೆಲಸ ಆರಂಭಿಸಲಾಗುವುದು ಎಂದಿದ್ದಾರೆ.