ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು
ಕಡಬ ಟೈಮ್, ಪ್ರಮುಖ ಸುದ್ದಿ: ಕಡಬದ ಸರಕಾರಿ ಪ್ರವಾಸಿ ಶಿಥಿಲಗೊಂಡು ಇತಿಹಾಸದ ಪುಟ ಸೇರುವ ಕಾಲ ಬಂದರೂ ಅಗತ್ಯವಾಗಿ ಬೇಕಿರುವ ಹೊಸ ಪ್ರವಾಸಿ ಬಂಗಲೆ ನಿರ್ಮಿಸಲು ಸೂಕ್ತ ಜಾಗ ಮಾತ್ರ ಇನ್ನೂ ನಿಗದಿಯಾಗಿಲ್ಲ.ಒಂದು ಕಾಲದಲ್ಲಿ ಅತ್ಯಂತ ಚಟುವಟಿಕೆಯ ತಾಣವಾಗಿದ್ದ ಈ ಪ್ರವಾಸಿ ಬಂಗಲೆ ಇದೀಗ ಯಾವುದೇ ಚಟುವಟಿಕೆಗಳಿಲ್ಲದೆ ಪರಿಸರದಲ್ಲಿ ಗಿಡಗಂಟಿ ಬೆಳೆದು ಅನಾಥವಾಗಿದೆ
ಹಳೆಯ ಪ್ರವಾಸಿ ಬಂಗಲೆಯನ್ನು ದುರಸ್ತಿಗೊಳಿಸುವ ಸಲುವಾಗಿ ಈ ಹಿಂದೆ ಪರಿಶೀಲನೆಗೆ ಆಗಮಿಸಿದ್ದ ಜಿ.ಪಂ. ಅಧಿಕಾರಿಗಳು ಕಟ್ಟಡ ಸಂಪೂರ್ಣ ಶಿಥಿಲ ಗೊಂಡಿದ್ದು, ದುರಸ್ತಿಗೆ ಯೋಗ್ಯವಾಗಿಲ್ಲ ಎಂದು ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕಟ್ಟಡವನ್ನು ತೆರವುಗೊಳಿ ಸಲು ನಿರ್ಧರಿಸಲಾಗಿತ್ತು. ಆದರೆ ಆ ಕೆಲಸ ಇದುವರೆಗೆ ಕಾರ್ಯಗತವಾಗಿಲ್ಲ. ಕಟ್ಟಡದ ಹಿಂಭಾಗ ಭಾಗಶಃ ಕುಸಿದಿದ್ದು, ಯಾವುದೇ ಕ್ಷಣದಲ್ಲಿ ಕಟ್ಟಡ ಪೂರ್ತಿಯಾಗಿ ನೆಲಕ್ಕುರುವ ಸಾಧ್ಯತೆಗಳಿವೆ. ಕಟ್ಟಡ ಕುಸಿದು ಅಪಾಯ ಸಂಭವಿಸುವ ಮೊದಲು ಈ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕಿದೆ.
ಮೂಲತಃ ಸರಕಾರಿ ಸಮುದಾಯ ಆಸ್ಪತ್ರೆಗೆ ಸೇರಿದ ಈ ಜಮೀನನ್ನು ಮತ್ತೆ ಆಸ್ಪತ್ರೆಯ ಉಪಯೋಗಕ್ಕೆ ನೀಡಬೇಕೆಂದು ಈ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿಯವರ ಮುಖಾಂತರ ಜಿ.ಪಂ.ಗೆ ಮನವಿ ಸಲ್ಲಿಸಲಾಗಿತ್ತು. ಮುಂದೆ ಸಮುದಾಯ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಉನ್ನತೀಕರಣವಾಗಬೇಕಿರುವುದರಿಂದ ಹೆಚ್ಚಿನ ಜಾಗದ ಅಗತ್ಯವಿರುವುದರಿಂದ ಸಂಬಂಧಪಟ್ಟವರು ಈ ಕುರಿತು ಕ್ರಮ ಕೈಗೊಳ್ಳಬೇಕಿದೆ.
ಕಲ್ಲಂತಡ್ಕದಲ್ಲಿ ಜಾಗ ಗುರುತು: ಕಡಬದ ಹಳೆಸ್ಟೇಶನ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ತಾ.ಪಂ. ಕಟ್ಟಡದ ಸಮೀಪವೇ ಹೊಸದಾಗಿ ಸುಸಜ್ಜಿತ ನಿರೀಕ್ಷಣ ಮಂದಿರ ನಿರ್ಮಿಸಲು ಜಮೀನು ಗುರುತಿಸಲಾಗಿತ್ತು. ಆದರೆ ಬಳಿಕದ ಬೆಳವಣಿಗೆಯಲ್ಲಿ ತಾ.ಪಂ. ಕಟ್ಟಡದ ಆವರಣದಲ್ಲಿ ವಾಹನ ಪಾರ್ಕಿಂಗ್ ಇತ್ಯಾದಿಗಳಿಗೆ ಜಾಗದ ಅಗತ್ಯವಿರುವುದರಿಂದ ಆ ಜಮೀನನ್ನು ಕೈಬಿಡಲಾಗಿದೆ. ಇದೀಗ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕದಲ್ಲಿರುವ ರುದ್ರಭೂಮಿಯ ಬಳಿ ನಿರೀಕ್ಷಣ ಮಂದಿರ ನಿರ್ಮಾಣಕ್ಕೆ ಜಾಗ ಗುರುತಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಮಾಹಿತಿ ನೀಡಿದ್ದಾರೆ.
ದಾನಿಗಳು ಕೊಟ್ಟಿದ್ದ ಜಮೀನು: ಕಡಬದ ಕೊಡುಗೈ ದಾನಿ ಎಂದೇ ಹೆಸರು ಪಡೆದಿರುವ ದಿ|ಮೇಲೂರು ಚಂದಯ್ಯ ಶೆಟ್ಟಿ ಅವರು 1925ನೇ ಇಸವಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಿಕೊಟ್ಟಿರುವ ಬಗ್ಗೆ ಲಭ್ಯ ದಾಖಲೆಗಳಲ್ಲಿ ಉಲ್ಲೇಖವಿದೆ. ಬಂಗಲೆ ಇರುವ ಜಮೀನು ಸೇರಿದಂತೆ ಒಟ್ಟು 2.29 ಎಕ್ರೆ ಜಮೀನನ್ನು ಅವರು ಅಂದಿನ ಕಾಲದಲ್ಲಿ ಸರಕಾರಿ ಆಸ್ಪತ್ರೆಗೆ ದಾನವಾಗಿ ಕೊಟ್ಟಿದ್ದರು. ಸಮುದಾಯ ಆಸ್ಪತ್ರೆಯ ಆವರಣದಲ್ಲಿರುವ ಈ ಕಟ್ಟಡ ಆರಂಭದಲ್ಲಿ ವೈದ್ಯಾಧಿಕಾರಿಗಳ ವಸತಿಗೃಹವಾಗಿತ್ತು. ಪುತ್ತೂರು ಬಿಡಿಒ ಕಚೇರಿ ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತಿತ್ತು. ಅನಂತರ 2 ಕೊಠಡಿಗಳನ್ನು ಸೇರಿಸಿ ಪುನಶ್ಚೇತನಗೊಳಿಸಿ ಈ ಕಟ್ಟಡವನ್ನು ಪ್ರವಾಸಿ ಬಂಗಲೆಯಾಗಿ ಪರಿವರ್ತಿಸಲಾಗಿತ್ತು. ಇತ್ತೀಚಿನ ಕೆಲ ವರ್ಷಗಳಲ್ಲಿ ತಾ.ಪಂ. ಹಾಗೂ ಗ್ರಾ.ಪಂ. ಆಡಳಿತ ಇದರ ನಿರ್ವಹಣೆಯ ಹೊಣೆ ಹೊತ್ತುಕೊಂಡಿತಾದರೂ ಈಗ ಈ ಕಟ್ಟಡವನ್ನು ಯಾರೂ ಕೇಳುವವರಿಲ್ಲದಂತಾಗಿದೆ.