ಕಡಬ ಟೈಮ್, ಪ್ರಮುಖ ಸುದ್ದಿ; ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ ಹಾಗೂ ಪರವಾನಗಿ ರಹಿತ ವಾಹನ ಚಾಲನೆ ನಿಷೇಧ ಕಾಯ್ದೆಯ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.




ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೋಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಗಮನ ಹರಿಸಿದಾಗ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಾಧ್ಯ, ಈ ನಿಟ್ಟಿನಲ್ಲಿ ಶಿಕ್ಷಕರೊಂದಿಗೆ ಪೋಷಕರು ಕೈ ಜೋಡಿಸಬೇಕು ಎಂದರು.


ಕಡಬ ಠಾಣಾ ಎಸ್‌ಐ ಅಕ್ಷಯ್ ಡವಗಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ವಾಹನ ನೀಡುವಾಗ ಯೋಚನೆ ಮಾಡ ಬೇಕು. ಅವರು ಅತೀ ವೇಗ, ಹೆಲೈಟ್ ರಹಿತ ಚಾಲನೆ ಮಾಡುತ್ತಾರೆ. ಎರಡರಿಂದ ಮೂರು ಜನ ಒಂದೇ ಬೈಕ್‌ನಲ್ಲಿ ಹೋಗು ತ್ತಾರೆ, ಕೆಲವು ವಿದ್ಯಾರ್ಥಿಗಳು ರೀಲ್ಸ್ ಕೂಡಮಾಡುತ್ತಾರೆ, ಇದೆಲ್ಲಾ ಕಾನೂನು ಬಾಹಿರ ವಾಗಿದೆ, ಕೆಲವು ವಿದ್ಯಾರ್ಥಿಗಳಲ್ಲಿ ವಾಹನ ಪರವಾನಗಿ, ವಾಹನದ ದಾಖಲೆಗಳು ಇರುವುದಿಲ್ಲ. ಈ ಬಗ್ಗೆ ಪೋಷಕರು ನಿಗಾ ವಹಿಸ ಬೇಕು. ಅಪಘಾತಗಳು ಸಂಭವಿಸಿದ ಬಳಿಕ ಪೋಷಕರು ಮರುಗುವುದಕ್ಕಿಂತ ಮೊದಲು ವಾಹನ ನೀಡುವುದರ ಬಗ್ಗೆ ಚಿಂತಿಸಬೇಕು. ಅಪ್ರಾಪ್ತರು ವಾಹನ ಚಲಾಯಿಸಿದರೆ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುವುದು ಎಂದರು.


ಹೆಡ್ ಕಾನ್‌ಸ್ಟೆಬಲ್ ಶಿವರಾಮ ಎಚ್.ಸಿ. ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟದಿಂದ ದೂರವಾಗಿ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದರು. ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ಉಪಸ್ಥಿತರಿದ್ದರು. ಉಪನ್ಯಾಸಕ ಸಲಿನ್ ಸ್ವಾಗತಿಸಿದರು. ಉಪನ್ಯಾಸಕ ಜ್ಞಾನೇಶ್ವರ ವಂದಿಸಿದರು. ಉಪನ್ಯಾಸಕಿ ಭಾರತಿ ನಿರೂಪಿಸಿದರು.