ಕಡಬ:
ರಸ್ತೆಯುದ್ದಕ್ಕೂ ಆಕರ್ಷಕ ಗೊಂಬೆ ಸಹಿತ ವಿವಿಧ ವೇಷಭೂಶಣಗಳ ಮುಖವಾಡದಲ್ಲಿ ನೃತ್ಯ, ಚೆಂಡೆಯ ಲಯಬದ್ದ ಸದ್ದು ಜೊತೆಗೆ ಅಲ್ಲಲ್ಲಿ ಅಟ್ಟಣಿಗೆ
ರಚಿಸಿ ಜೋಡಿಸಲಾಗಿದ್ದ ರಂಗು ತುಂಬಿದ ಮಡಿಕೆಗಳನ್ನು ಹೊಡೆದುರುಳಿಸುವ ಮೈ ನವಿರೇಳಿಸುವ ಯುವಕರ
ಸಾಹಸ ಭರಿತ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ… ಇಂತಹ
ನಯನಮನೋಹರ ದೃಶ್ಯ ಕಂಡು ಬಂದದ್ದು ಕಡಬ
ಪೇಟೆಯಲ್ಲಿ.


![]() ![]() |
ಕಡಬದ ಪೇಟೆಯಲ್ಲಿ ಜನ ಜಾತ್ರೆ |


ವಿಹಿಂಪ,
ಬಜರಂಗದಳದಿಂದ ಮೊಸರು ಕುಡಿಕೆ ಉತ್ಸವ, ಶೋಭಾಯಾತ್ರೆ, ಭಾನುವಾರ ಸಂಭ್ರಮದ ಕ್ಷಣಗಳನ್ನು ಸೃಷ್ಟಿಸಿತು. ಪ್ರತಿ
ವರ್ಷವೂ ಕಾರ್ಯಕ್ರಮ ಆಯೋಜಕರು, ಸಂಘಟನೆಯ
ಯುವಕರು ಅದ್ದೂರಿಯಾಗಿ ಆಯೋಜಿಸುತ್ತಾ
ಬರುತ್ತಿದ್ದಾರೆ.


ಭಾನುವಾರವಾದ
ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು, ವಿವಿಧ ಗ್ರಾಮದ ಜನರು ಮೊಸರು ಕುಡಿಕೆ ಉತ್ಸವ, ಆಕರ್ಷಕ ಶೋಭಾಯಾತ್ರೆ ನೋಡಲು ಬಂದಿದ್ದರು.
ಕಡಬದ ಮುಖ್ಯರಸ್ತೆಯ ಉದ್ದಕ್ಕೂ
ಅಲ್ಲಲ್ಲಿ ಕಂಬಗಳನ್ನು ನೆಟ್ಟು ಸಾಲು ಸಾಲಾಗಿ ಕಟ್ಟಲಾಗಿದ್ದ ಬಣ್ಣ ಬಣ್ಣದ ಮಡಿಕೆಗಳನ್ನು ತರುಣರು ತಂಡವಾಗಿ ಒಬ್ಬರ ಮೇಲೊಬ್ಬರು ನಿಂತು ಒಡೆದುಹಾಕಲು ನಡೆಸುತ್ತಿದ್ದ ರೋಮಾಂಚಕ ಪ್ರಯತ್ನಗಳನ್ನು ರಸ್ತೆಯ ಇಕ್ಕೆಲೆಗಳಲ್ಲಿಯೂ ನಿಂತಿದ್ದ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿ ಸಂಭ್ರಮಿಸಿದ್ದಾರೆ.
ಕೊನೆಗೂ
ಗುರಿ ತಲುಪಿ ಮಡಿಕೆಗಳನ್ನು ಒಡೆದು ರಂಗು ನೀರಿನಲ್ಲಿ ಮಿಂದೆದ್ದ ಯುವಕರ ಹರ್ಷೋದ್ಧಾರಕ್ಕೆ ನೆರೆದಿದ್ದ ಜನರೂ ದನಿಗೂಡಿಸಿ ಖುಷಿಪಡುವ ಆ ಕ್ಷಣ ನಿಜಕ್ಕೂ
ಹೇಳತೀರದು . ಕಾರ್ಯಕ್ರಮದ ಉದ್ದಕ್ಕೂ ಆಗಾಗ ಸುರಿದು ತಂಪೆರೆದ ಮಳೆಯ ಸಿಂಚನ ಜನರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

