ಉಪ್ಪಿನಂಗಡಿ
– ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬ ರಸ್ತೆಯಲ್ಲಿ ನಿರ್ಮಾಣವಾದ ಹೊಂಡಗಳಿಗೆ ಭಾನುವಾರ ಬಾಳೆಗಿಡ ಹಾಗೂ ಕೆಸುವಿನ ಗಿಡನೆಟ್ಟು ಆಟೋ ಚಾಲಕರು ಹಾಗೂ ಸ್ಥಳೀಯರು ವಿನೂತನವಾಗಿ ಪ್ರತಿಭಟನೆ ನಡೆಸಿದರು.


ಈ
ಪ್ರತಿಭಟನೆಯ ಸುದ್ದಿ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹೊಂಡ ತುಂಬಿರುವ ರಸ್ತೆಗೆ ಜಲ್ಲಿ ಕಲ್ಲು,
ಕಲ್ಲಿನ ಪುಡಿ ಹಾಕಿ ಮುಚ್ಚುವ
ಕಾರ್ಯ ಮಾಡಿದ್ದಾರೆ. ಅಧಿಕಾರಿಗಳ ತಕ್ಷಣ ಸ್ಪಂದನೆಗೆ ಈ ಭಾಗದ ಜನಸಾಮಾನ್ಯರು,ವಾಹನ ಸವಾರರು
ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




ಪವಿತ್ರ
ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಬರುವ ಈ ರಾಜ್ಯ ಹೆದ್ದಾರಿ
ರಸ್ತೆಯಲ್ಲಿ ಹಲವೆಡೆ ಹೊಂಡಗಳು ನಿರ್ಮಾಣವಾಗಿ ವಾಹನ ಅಪಘಾತಗಳು ಹೆಚ್ಚಾಗಿವೆ. ಬೈಕ್
ಸವಾರರು ರಾತ್ರಿ ವೇಳೆ ಸಂಚರಿಸುವಾಗ ಹೊಂಡ ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಘಟನೆಗಳು ನಡೆದಿತ್ತು. ಈ ಭಾಗದಲ್ಲಿ
ತಕ್ಷಣಕ್ಕೆ ಯಾವುದೇ ಆಸ್ಪತ್ರೆಗಳು, ಆಂಬ್ಯುಲೆನ್ಸ್ಗಳು ಇರುವುದಿಲ್ಲ. ರಸ್ತೆ ಹಾಳಾದ ಕಾರಣ ರಾತ್ರಿ ವೇಳೆ ಗಾಯಗೊಂಡವರನ್ನು ರಕ್ಷಿಸಲು ಕಡಬ, ಉಪ್ಪಿನಂಗಡಿ, ಮಂಗಳೂರು ಆಸ್ಪತ್ರೆಗೆ ದಾಖಲಿಸುವ ಪರಿಸ್ಥಿತಿ ಎದುರಾಗಿದೆ.


ಭಾನುವಾರ
ಕೈಕಂಬ ಆಟೋರಿಕ್ಷಾ ಚಾಲಕರು, ಸ್ಥಳೀಯ ಹಿರಿಯರು ಸೇರಿ, ರಸ್ತೆಯ ಹೊಂಡಕ್ಕೆ ಬಾಳೆಗಿಡ ಹಾಗೂ ಕೆಸುವಿನ ಗಿಡವನ್ನು ನೆಟ್ಟು ಪ್ರತಿಭಟಿಸಿದರು. ಆದಷ್ಟು ಬೇಗ ರಸ್ತೆಯನ್ನು ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ರಸ್ತೆ ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ರವಾನಿಸಿದರು.