ಕಡಬ: ಇಲ್ಲಿನ ಠಾಣಾ ವ್ಯಾಪ್ತಿಯ ಪಿಜಕ್ಕಳದ ಕಂಗುಳೆ ಎಂಬಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಆರೋಪದ ಮೇರೆಗೆ ವಾಹನ ಸಹಿತ ಕೆಲವರನ್ನು ವಶಕ್ಕೆ ಪಡೆದ ಘಟನೆ ಅ. 1 ರಂದು ವರದಿಯಾಗಿದೆ.
ಕಡಬ- ಎಡಮಂಗಲ ರಸ್ತೆಯ ಪಾಲೊಲಿ ಸೇತುವೆಯ ಕೆಲ ಭಾಗದ ಕುಮಾರಧಾರ ನದಿಯಿಂದ ಸ್ಥಳೀಯ ಮರಳು ದಂಧೆಕೋರರು ಹಲವು ಸಮಯದಿಂದ ಅಕ್ರಮವಾಗಿ ಮರಳು ಸಾಗಾಟದಲ್ಲಿ ನಿರತರಾಗಿದ್ದರು ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿ ಆರಂಭದಲ್ಲಿ ಪೊಲೀಸರು ಮೂವರನ್ನು ವಶಕೆ ಪಡೆದು ವಿಚಾರಿಸಿದ್ದು ಬಳಿಕ ಪಿಕಪ್ ವಾಹನವನ್ನು ಠಾಣೆಗೆ ಕರೆದೊಯ್ದಿರುವುದುದಾಗಿ ತಿಳಿದು ಬಂದಿದೆ.
ವಿಪರ್ಯಾಸವೆಂದರೆ ಅಕ್ರಮ ಮರಳು ಸಾಗಾಟಕ್ಕೆ ಬಳಕೆ ಮಾಡಿದ ವಾಹನವನ್ನು ಯಾವುದೇ ಸುಳಿವು ಸಿಗದಂತೆ ತೊಳೆದು ಇಟ್ಟಿರುವುದಾಗಿ ಹೇಳಲಾಗುತ್ತಿದೆ.ಹೀಗಾಗಿ ಪೊಲಿಸರನ್ನೇ ಮರಳು ದಂಧೆಕೋರರು ಗೊಂದಲಕ್ಕೆ ಒಳಗಾಗುವಂತೆ ಮಾಡಿದರೇ ಎಂಬ ಸುದ್ದಿ ಹರಡಿದೆ.ಈ ನಡುವೆ ವಾಹನದ ದಾಖಲೆ ಪತ್ರಗಳನ್ನು ಠಾಣೆಗೆ ಹಾಜರು ಪಡಿಸುವಂತೆ ಪೊಲೀಸರು ಸೂಚಿಸಿರುವುದಾಗಿ ತಿಳಿದು ಬಂದಿದೆ.
ಸ್ಥಳೀಯರ ಮಾಹಿತಿ ಪ್ರಕಾರ ಹಲವು ಸಮಯಗಳಿಂದ ಇಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ ಎನ್ನುತ್ತಾರೆ. ಅಕ್ರಮ ಮರಳುಗಾರಿಕೆ ನಡೆದ ಜಾಗದಲ್ಲಿ ಮರಳು ತೆಗೆದ ಕುರುಹು ಪತ್ತೆಯಾಗಿದೆ.
ಕಡಬದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವುದು ಮೊದಲೇನು ಅಲ್ಲ. ರಾಜಕೀಯದಲ್ಲಿ ಗುರುತಿಸಿಕೊಂಡವರ ಬೆಂಬಲ ಹಾಗೂ ಮುಂದಾಳತ್ವದಲ್ಲೇ ಆಗಾಗ ಅಕ್ರಮ ಮರಳು ದಂಧೆ ನಡೆಯುತ್ತಿರುವ ಆರೋಪಗಳು ಕೇಳಿ ಬರುತ್ತಿದೆ. ದಾಳಿ ಮಾಡಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ರಾಜಕೀಯ ಒತ್ತಡ ತಂದು ಕರ್ತವ್ಯಕ್ಕೆ ತಡೆಯೊಡ್ಡುವ ಪ್ರಸಂಗಗಳು ಹಿಂದೆಯೂ ನಡೆದಿತ್ತು.