ಕಡಬ ಟೈಮ್ಸ್: ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ (86 ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ತಡರಾತ್ರಿ ನಗರದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ರಕ್ತದೊತ್ತಡದಲ್ಲಿ ಕುಸಿತದ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಸೋಮವಾರ ರತನ್ ಟಾಟಾ ಮುಂಬಯಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಹಿಂದೆ ಅನಾರೋಗ್ಯದ ಕಾರಣಕ್ಕಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರೂ, ಬಳಿಕ ಈ ಬಗ್ಗೆ ಅವರೇ ಸ್ಪಷ್ಟೀಕರಣ ನೀಡಿದ್ದರು. ಆದರೆ, ಬುಧವಾರದ ವೇಳೆಗೆ ಮತ್ತೊಮ್ಮೆ ಗಂಭೀರ ಸ್ಥಿತಿಯಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ತಡರಾತ್ರಿ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
1991ರಲ್ಲಿ ಟಾಟಾ ಸನ್ಸ್‌ನ ಚೇರ್ಮನ್ ಆಗಿದ್ದ ರತನ್ ಟಾಟಾ, 2012ರವರೆಗೂ ಈ ಹುದ್ದೆಯಲ್ಲಿದ್ದರು. ತಮ್ಮ ಮರಿ ಮುತ್ತಜ್ಜ ಸ್ಥಾಪನೆ ಮಾಡಿದ್ದ ಗ್ರೂಪ್ ಅನ್ನು ದೊಡ್ಡ ಮಟ್ಟದಲ್ಲಿ ಯಶಸ್ಸಿನ ಪಥದಲ್ಲಿ ಸಾಗಿಸಿದ್ದರು. 1996ರಲ್ಲಿ ಟಾಟಾ ಟೆಲಿ ಸರ್ವೀಸಸ್ ಕಂಪನಿ ಸ್ಥಾಪನೆ ಬಳಿಕ 2004ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಂಪನಿ ಸಾರ್ವಜನಿಕ ಪಾಲುದಾರ ಕಂಪನಿಯಾಗಿ ಮಾಡಿದ್ದರು.