ನೆಲ್ಯಾಡಿ: ಎರಡು ವಾರದ ಹಿಂದೆ ರಾಷ್ಟ್ರೀಯ ಹೆದ್ದಾರಿ 75ರ ಇಚ್ಲಂಪಾಡಿ ಗ್ರಾಮದ ಲಾವತ್ತಡ್ಕದಲ್ಲಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಮಾ.19ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ಮಂಗಳೂರು ನಿವಾಸಿ ಬಿ.ಮೋಹನ್ ಅವರ ಪತ್ನಿ ಶಶಿಕಲಾ ಮೃತಪಟ್ಟವರು. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಪುತ್ರನ ಮನೆಗೆ ಹೋಗಿದ್ದ ದಂಪತಿಗಳು ಮಾ.7ರಂದು ಬೆಂಗಳೂರಿನಿಂದ ಮಂಗಳೂರಿನತ್ತ ಕಾರಿನಲ್ಲಿ ಬರುತ್ತಿದ್ದವರು ಇಚ್ಲಂಪಾಡಿ ಗ್ರಾಮದ ಲಾವತಡ್ಕ ಎಂಬಲ್ಲಿಗೆ ತಲುಪಿದಾಗ ಕಾರು ರಸ್ತೆಯ ಕಟ್ಟೆಗೆ ತಾಗಿ ಅಲ್ಲಿಂದ ಸ್ಕಿಡ್ ಆಗಿ ರಸ್ತೆ ಬದಿಯ ದಿನ್ನೆಗೆ ತಾಗಿದೆ.




ಇದರಿಂದಾಗಿ ಶಶಿಕಲಾ ಹಾಗೂ ಕಾರು ಚಲಾಯಿಸುತ್ತಿದ್ದ ಬಿ.ಮೋಹನ್ ಅವರು ಗಾಯಗೊಂಡಿದ್ದು ಇಬ್ಬರನ್ನು ಉಪಚರಿಸಿ ಆಂಬುಲೆನ್ಸ್‌ನಲ್ಲಿ ಕರೆದೊಯ್ದು ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಯಲ್ಲಿದ್ದ ಶಶಿಕಲಾ ಅವರು ಚಿಕಿತ್ಸೆ ಫಲಕಾರಿಯಾಗದೇ ಮಾ.19ರಂದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.


ಈ ಬಗ್ಗೆ ಮೃತರ ಪುತ್ರ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ರೋಶನ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.