ನೆಟ್ಟಣ: ನೈರುತ್ಯ ವಲಯ ರೈಲ್ವೆ ಜನರಲ್ ಮ್ಯಾನೇಜರ್ ಮುಕುಲ್ ಶರಣ್ ಮಥುರ್ ಅವರು ಮಾ.18 ರಂದು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಭೇಟಿ ಅಭಿವೃದ್ದಿ ಕಾಮಗಾರಿಯನ್ನು ಕೆಲ ಕಾಲ ಪರಿಶೀಲನೆ ನಡೆಸಿದ್ದಾರೆ. ಆದರೆ ಸಮರ್ಪಕವಾಗಿ ಪರಿಶೀಲನೆಗೆ ಮುಂದಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.


ವಿಶೇಷ ರೈಲಿನ ಮೂಲಕ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಆಗಮಿಸಿದ ಅವರು ಎರಡನೇ ಪ್ಲಾಟ್ ಫಾರ್ಮ್ನಲ್ಲಿ ಕೆಲಹೊತ್ತು ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಆ ಬಳಿಕ ನಿಲ್ದಾಣದ ಪಾರ್ಕಿಂಗ್ ಕಾಮಗಾರಿ ವೀಕ್ಷಿಸಿದರು. ತದನಂತರ, ಅಧಿಕಾರಿಗಳ ಜೊತೆಗೆ ಪಾದಚಾರಿ ಮೇಲ್ಸೇತುವೆ ಮೂಲಕ ಎರಡನೇ ಪ್ಲಾಟ್ ಫಾರಂಗೆ ತೆರಳಿ, ಅಲ್ಲಿಂದ ತಾವು ಆಗಮಿಸಿದ್ದ ರೈಲಿನಲ್ಲಿ ತೆರಳಿದರು.


ಭೇಟಿ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ನಾನು ಹೊಸದಾಗಿ ಬಂದಿದ್ದೇನೆ. ಕಾಮಗಾರಿ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡುತ್ತೇನೆ” ಎಂದರು. ಆದರೆ ಬಳಿಕ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ರೈಲ್ವೆ ಇಲಾಖೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿ, ರಕ್ಷಣಾ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಹಾಗೂ ಕಾಮಗಾರಿ ನಿರ್ವಹಿಸುವ ತಂಡದವರು ಜೊತೆಗಿದ್ದರು.


ಸಾರ್ವಜನಿಕರ ಅಸಮಾಧಾನ: ”ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಅಮೃತ ಭಾರತ್ ಯೋಜನೆಯಡಿ 22.5 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇದು ಡಿಸೆಂಬರ್‌ನಲ್ಲೇ ಮುಗಿಯಬೇಕಿತ್ತು. ಆದರೆ ಮಾರ್ಚ್ಗೆ ಮುಗಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೂ ಕಾಮಗಾರಿ ವೇಗ ಪಡೆದಿಲ್ಲ. ಇಲ್ಲಿ ಕಾಮಗಾರಿಯ ಗುಣಮಟ್ಟದಲ್ಲಿ ಲೋಪ ಆಗಿರುವ ಹಾಗೂ ಕಳಪೆಯಾಗಿರುವ ಶಂಕೆ ಇದೆ. ಈ ಬಗ್ಗೆ ಇಲ್ಲಿಗೆ ಆಗಮಿಸುವ ಅಧಿಕಾರಿಗಳಿಗೆ ಮಾಹಿತಿ ನೀಡೋಣವೆಂದರೆ, ಅವರು ಕೂಡ ಕಾಟಾಚಾರಕ್ಕೆ ಭೇಟಿ ನೀಡಿದಂತಿದೆ. ಯಾವುದೇ ಕಾಮಗಾರಿಯನ್ನು ಸಮರ್ಪಕವಾಗಿ ಪರಿಶೀಲನೆ ನಡೆಸದೇ ಹೋಗುವುದಾದರೆ, ಇಲ್ಲಿಗೆ ಬರುವುದು ಯಾಕೆ” ಎಂದು ನೆಟ್ಟಣ ರೈಲ್ವೆ ಬಳಕೆದಾರರ ಸಂಘದ ಪ್ರಸಾದ್ ನೆಟ್ಟಣ ಅಸಮಾಧಾನ ಹೊರಹಾಕಿದರು.
ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ”ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಜಿ.ಎಂ. ಭೇಟಿ ನೀಡಿರುವುದು ನಿರಾಸೆ ತಂದಿದೆ. ಇಲ್ಲಿನ ಅಭಿವೃದ್ಧಿ, ಅವ್ಯವಸ್ಥೆ ಬಗ್ಗೆ ಈ ಮೊದಲೇ ಸಂಬಂಧಿಸಿದವರಿಗೆ ತಿಳಿಸಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಲು ಬಂದರೂ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಸುಖಾಸುಮ್ಮನೆ ಸರ್ಕಾರದ ಹಣ ಖರ್ಚು ಮಾಡುತ್ತಿದ್ದಾರೆ. ಈ ಬಗ್ಗೆ ರೈಲ್ವೆ ಸಚಿವರ ಗಮನಕ್ಕೆ ತರಲಾಗುವುದು” ಎಂದರು.


ಅಧಿಕಾರಿಗಳು ಬರುವಾಗ ಕಾಮಗಾರಿ ಚುರುಕು: ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಅಭಿವೃದ್ಧಿ ಕೆಲಸಗಳು ನಿಧಾನ ಹಾಗೂ ಅವ್ಯವಸ್ಥಿತವಾಗಿ ನಡೆಯುತ್ತಿವೆ. ಅಧಿಕಾರಿಗಳು ಭೇಟಿ ನೀಡುವ ಹಿಂದಿನ ದಿನ ಕಾಮಗಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಇಲ್ಲಿ ಆಗುತ್ತಿದೆ. ಉನ್ನತ ಅಧಿಕಾರಿಗಳು ಬಂದರೂ ಅವರು ಸಮರ್ಪಕವಾಗಿ ಕಾಮಗಾರಿ ಪರಿಶೀಲನೆ ನಡೆಸದೆ, ಸಾರ್ವಜನಿಕರ ಅಹವಾಲು ಆಲಿಸದೇ ತೆರಳುತ್ತಿರುವುದು ಬೇಸರದ ಸಂಗತಿ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.