23.9 C
Kadaba
Friday, March 21, 2025

ಹೊಸ ಸುದ್ದಿಗಳು

ಕಡಬ :ನನಗೆ ಹಕ್ಕುಪತ್ರ ತೆಗೆಸಿಕೊಡಿ ಎಂದು ಲೋಕಾಯುಕ್ತ ಅಧಿಕಾರಿಗಳ ಎದುರು ಕಣ್ಣೀರು ಹಾಕಿದ ವೃದ್ದೆ

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್,KADABA TIMES:ಕಡಬ ತಾಲೂಕು ಮಟ್ಟದ ಲೋಕಾಯುಕ್ತ ಜನಸಂಪರ್ಕ ಸಭೆಯು ಮಾ.19ರಂದು ಮಂಗಳೂರು ಲೋಕಾಯುಕ್ತ ವಿಭಾಗದ ಎಸ್‌ಪಿ ಕುಮಾರಚಂದ್ರ  ಅವರ ನೇತೃತ್ವದಲ್ಲಿ ನಡೆದಿದ್ದು ಬರೇ ಏಳು ದೂರು ಅರ್ಜಿಗಳು ಸಲ್ಲಿಕೆಯಾಗಿದೆ.

kadabatimes.in

ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರೂ ಬೆರಳೆಣಿಕೆಯ ಸಾರ್ವಜನಿಕರು ಭಾಗವಹಿಸಿರುವುದು ಕಂಡು ಬಂತು. ಕಂದಾಯ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಗಳಲ್ಲಿನ ಭ್ರಷ್ಟಾಚಾರ,  ಸಾರ್ವಜನಿಕರನ್ನು ಸತಾಯಿಸುವುದು ಮುಂತಾದ ವಿಚಾರಗಳ ಬಗ್ಗೆ ಆರೋಪಿಸುವ ಸಾರ್ವಜನಿಕರು ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ  ಸಮರ್ಪಕ ಮಾಹಿತಿ ಕೊರತೆಯಿಂದ ದೂರು ನೀಡಲು ಹಿಂದೇಟು ಹಾಕುತ್ತಿರುವುದು  ಮೇಲ್ನೋಟಕ್ಕೆ ಕಂಡು ಬಂದಿದೆ.

kadabatimes.in

ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ವೃದ್ಧೆ: ಅಕ್ರಮ ಸಕ್ರಮ ಜಮೀನಿನ ಮಂಜೂರಾತಿಗಾಗಿ ಕಳೆದ 33  ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿರುವ ಇಚ್ಲಂಪಾಡಿ ಗ್ರಾಮದ ಅಲೆಕ್ಕಿ ನಿವಾಸಿ  ವೃದ್ಧೆಯಾಗಿರುವ  ಕಮಲಾಕ್ಷಿ ಅವರು ನನಗೆ ಹಕ್ಕುಪತ್ರ ತೆಗೆಸಿಕೊಡಿ, ಇಲ್ಲದೇ ಹೋದರೆ ಜೀವ ಕಳೆದುಕೊಳ್ಳುವುದಷ್ಟೇ ನನ್ನ ಮುಂದಿರುವ ದಾರಿ ಎಂದು  ಅಧಿಕಾರಿಗಳ ಮುಂದೆ ಕಣ್ಣೀರಿಟ್ಟರು . ನಾನು ಗಂಡನನ್ನು ಕಳೆದುಕೊಂಡಿರುವ ವಿಧವೆ, ನನಗೆ ಮಕ್ಕಳೂ ಇಲ್ಲ.  ತಾಲೂಕು ಕಚೇರಿಗೆ ಬಂದರೆ ಕಡತ ಪುತ್ತೂರಿನಲ್ಲಿದೆ ಎನ್ನುತ್ತಾರೆ. ಪುತ್ತೂರಿಗೆ ಹೋದರೆ ಅಲ್ಲಿ ಕಡತವೇ ಇಲ್ಲ ಎನ್ನುತ್ತಾರೆ. ಕಡಬ ಮತ್ತು ಪುತ್ತೂರಿಗೆ ಅಲೆದಾಡಿ ನನಗೆ ಸಾಕಾಗಿ ಹೋಗಿದೆ ಎಂದು ಅಳಲು ತೋಡಿಕೊಂಡ ಅವರನ್ನು ಸಮಾಧಾನಿಸಿ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಇನ್ನು ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಲ್ಲಗಂಡಿ, ಬಾಜಿನಾಡಿ, ಕಲ್ಲಿಮಾರು, ಪನ್ಯ, ಮರೆಂಗೋಡಿ, ಬದಿಗುಡ್ಡೆ  ಪ್ರದೇಶಕ್ಕೆ ಕುಡಿಯುವ ನೀರಿನ ನಳ್ಳಿ ಸಂಪರ್ಕ ಒದಗಿಸುವ ಕುರಿತು ಅಶೋಕ್‌ಕುಮಾರ್ ರೈ,  ಪೆರಾಬೆ ಗ್ರಾಮದಲ್ಲಿ ಗೃಹನಿವೇಶನಕ್ಕೆ ಕಾದಿರಿಸದ ಜಮೀನು ಗಡಿಗುರುತು ಮಾಡಿಸಿಕೊಡುವಂತೆ ಪೆರಾಬೆ ಗ್ರಾ.ಪಂ.ಸದಸ್ಯ ಫಯಾಝ್,  ಕೃಷಿ ಜಮೀನಿಗೆ ತೆರಳುವ ಸರಕಾರಿ ಜಾಗದಲ್ಲಿರುವ ದಾರಿಯನ್ನು ಸ್ಥಳೀಯ ವ್ಯಕ್ತಿ  ಅಕ್ರಮವಾಗಿ ಮುಚ್ಚಿರುವ ಬಗ್ಗೆ ಕಡಬದ ದಾಂಬ್ರೋಡಿ ನಿವಾಸಿ ಸೀತಾರಾಮ ನಾಯಕ್ ಅವರು ಅಹವಾಲು ಸಲ್ಲಿಸಿದ್ದಾರೆ.

kadabatimes.in

ತಮ್ಮ ಕೆಲಸಕಾರ್ಯಗಳಿಗೆ ತೊಂದರೆ ನೀಡಬಹುದು ಎನ್ನುವ ಭಯದಿಂದ  ಸಾರ್ವಜನಿಕರು ಲಂಚಕೋರ ಅಧಿಕಾರಿಗಳ ವಿರುದ್ಧ  ದೂರು ನೀಡಲು ಹಿಂಜರಿಯುತ್ತಿದ್ದಾರೆ.  ಸಾರ್ವಜನಿಕರ ಯಾವುದೇ ಕಾನೂನು ಬದ್ಧವಾದ ಕೆಲಸವನ್ನು ಮಾಡಿಕೊಡುವುದು ಸರಕಾರಿ ಅಧಿಕಾರಿಗಳು ಮತ್ತು ಸಿಬಂದಿಗಳ ಕರ್ತವ್ಯವಾಗಿದೆ. ಜನರನ್ನು  ವಿನಾ ಕಾರಣ ಅಲೆದಾಡಿಸಿ ಹಣಕ್ಕಾಗಿ ಪೀಡಿಸಿದರೆ ಅಂತಹವರ ವಿರುದ್ಧ  ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಗಳನ್ನು ಭರ್ತಿ ಮಾಡಿ ಅಫಿದಾವಿತ್ ಮಾಡಿ ಸಲ್ಲಿಸಬೇಕು. ದೂರುದಾರರಿಗೆ ಅಧಿಕಾರಿಗಳು ಕಿರುಕುಳ ನೀಡದಂತೆ ರಕ್ಷಣೆ ನೀಡಲಾಗುವುದು :-ಎಸ್‌ಪಿ ಕುಮಾರಚಂದ್ರ( ಮಂಗಳೂರು ಲೋಕಾಯುಕ್ತ ವಿಭಾಗ)

ಲೋಕಾಯುಕ್ತ ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಲು ನಿರಾಸಕ್ತಿ ತೋರುತ್ತಿರುವ ಕುರಿತು ಮಾದ್ಯಮದವರ  ಪ್ರಶ್ನೆಗೆ ಪ್ರತಿಕ್ರಿಯಿಸಿದ  ಎಸ್‌ಪಿ ಕುಮಾರಚಂದ್ರ  ಅವರು ಲೋಕಾಯುಕ್ತ ಸಂಸ್ಥೆಯ ಬಗ್ಗೆ  ಜನರಿಗೆ ಅರಿವು ಮೂಡಿಸಲು ಗ್ರಾಮಸಭೆಗಳಲ್ಲಿ  ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

kadabatimes.in

ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಎಸ.ಐ ಅಭಿನಂದನ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು, ಲೋಕಾಯುಕ್ತ ಡಿವೈಎಸ್ಪಿ ಡಾ|ಗಾನಾ ಪಿ.ಕುಮಾರ್, ಇನ್ಸ್ಪೆಕ್ಟರ್ ಚಂದ್ರಶೇಖರ್ ಕೆ.ಎನ್., ಸಿಬಂದಿಗಳಾದ ಮಹೇಶ್, ಶರತ್ ಸಿಂಗ್, ಸುರೇಂದ್ರ, ವಿನಾಯಕ್, ರುದ್ರೇಗೌಡ ಪಾಲ್ಗೊಂಡಿದ್ದರು.