ಕಡಬ ಟೈಮ್(KADABA TIMES):ತಾಲೂಕಿನ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಓಂತ್ರಡ್ಕದಲ್ಲಿ ಆಂಗ್ಲ ಭಾಷ ಪದವೀಧರ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ದಿಲೀಪ್ ಕುಮಾರ್ ಸಂಪಡ್ಕ ಅವರು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ (ರಿ) ನೀಡುವ ರಾಷ್ಟ್ರೀಯ ಶಿಕ್ಷಣ ಸೌರಭ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ಶೈಕ್ಷಣಿಕ ಚಿಂತಕ, ಅಂಕಣಕಾರ, ಕಥೆಗಾರರಾಗಿ ಗುರುತಿಸಿಕೊಂಡಿರುವ ದೀಲಿಪ್ ಕುಮಾರ್ ಅವರ ಶಿಕ್ಷಣ, ಸಂಘಟನೆ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ ಭಾನುವಾರ ಶಿವಮೊಗ್ಗದ ಕರ್ನಾಟಕ ಸಂಘದ ಸಭಾಭವನದಲ್ಲಿ ನಡೆದ ರಾಷ್ಟ್ರ ಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ (ರಿ) ಅಧ್ಯಕ್ಷ ಮುಧುನಾಯ್ಕ ಲಂಬಾಣಿ ಇವರ ಸಮ್ಮುಖದಲ್ಲಿ ರಾಷ್ಟ್ರ ಮಟ್ಟದ ಶಿಕ್ಷಣ ಸೌರಭ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.




ಓಂತ್ರಡ್ಕ ಶಾಲೆಯಲ್ಲಿ ಕಳೆದ ಒಂಭತ್ತು ವರ್ಷಗಳಿಂದ ಪದವೀಧರ ಪ್ರಾಥಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಸಿ.ಬಿ.ಎಸ್.ಸಿ ಶಾಲೆಗಳಲ್ಲಿ ಶೈಕ್ಷಣಿಕ ಕೋ-ಆರ್ಡಿನೇಟರ್, ಪ್ರಾಂಶುಪಾಲರಾಗಿ ಸಹ ಕಾರ್ಯನಿರ್ವಹಿಸಿರುತ್ತಾರೆ. ಶಿಕ್ಷಣ ಇಲಾಖೆಯಲ್ಲಿ ಹಲವು ತರಬೇತಿಗಳಿಗೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಶಿಕ್ಷಕರಿಗೆ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಹಲವು ಲೇಖನಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ,ರಾಷ್ಟ್ರೀಯ ಮತ್ತು ಅಂತರಾಷ್ಷೀಯ ನಿಯತಕಾಲಿಕೆಗಳಲ್ಲಿ ಕೂಡ ಪ್ರಕಟಗೊಂಡಿದೆ.


ಇವರು ರಂಗಭೂಮಿ ಕಲಾವಿದರಾಗಿ, ಹಲವಾರು ರಂಗಪ್ರದರ್ಶನಗಳಲ್ಲಿ ಸಹ ಹೆಸರು ಮಾಡಿದ್ದಾರೆ. ವಿವಿಧ ಶಿಕ್ಷಕ ಸಂಘಟನೆಗಳ ಮೂಲಕ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.