ಕಡಬ : ಪಶ್ಚಿಮಘಟ್ಟ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹಾಗೂ ಬಾಧಿತ ಗ್ರಾಮಸ್ಥರಿಗೆ ಶಾಶ್ವತ ಪರಿಹಾರಕ್ಕೆ ಹೋರಾಟ ನಡೆಸಲು ರೂಪುರೇಷೆ ಸಿದ್ಧತೆಗಾಗಿ ಗ್ರಾಮಸ್ಥರ ಸಭೆಯು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಇವರ ನೇತೃತ್ವದಲ್ಲಿ ಸೆ.22ರಂದು ಶಿರಾಡಿ ಗ್ರಾಮದ ಗುಂಡ್ಯ ಮಾಡದ ಮೈದಾನದಲ್ಲಿ ನಡೆಯಿತು.




ಸಭೆ ಉದ್ದೇಶಿಸಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಅವರು, ಪರಿಸರ ಸಂರಕ್ಷಣೆ ನೆಪದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅರಣ್ಯ ಇಲಾಖೆಯು ಕಗ್ಗೊಲೆ ಮಾಡುತ್ತಿದೆ. 2011ರಲ್ಲಿ ಪುಷ್ಪಗಿರಿ ಯೋಜನೆ ಜಾರಿಗೆ ತರಲು ಸರಕಾರ ಮುಂದಾಗಿತ್ತು. ಆದರೆ ಜನರ ವಿರೋಧ ಇದ್ದ ಕಾರಣ ಅದು ವಿಫಲವಾಯಿತು. ಆ ನಂತರ ಪಶ್ಚಿಮ ಘಟ್ಟ ತಪ್ಪಲು ಪ್ರದೇಶದಲ್ಲಿ ಬೇರೆ ಬೇರೆ ಯೋಜನೆಗಳ ಜಾರಿಗೆ ಅರಣ್ಯ ಇಲಾಖೆ ಪ್ರಯತ್ನ ಮಾಡುತ್ತಲೇ ಬಂದಿದೆ. ಈ ಮೂಲಕ ಪಶ್ಚಿಮ ಘಟ್ಟ ತಪ್ಪಲು ಪ್ರದೇಶದ ರೈತರಿಗೆ ಮಾನಸಿಕ ಹಿಂಸೆ ನೀಡುತ್ತಾ ಬಂದಿದೆ.


ಸರಕಾರದ ಯೋಜನೆಯಿಂದಾಗಿ ತಮ್ಮ ಹಿರಿಯರು ಮಾಡಿಟ್ಟಿರುವ ಕೃಷಿ ಭೂಮಿಯನ್ನು ಕಳೆದುಕೊಂಡು ನಿರಾಶ್ರಿತರಾಗುವ ಆತಂಕ ರೈತರಲ್ಲಿ ಉಂಟಾಗಿದೆ ಎಂದರು. 2014ರಿಂದ ಕಸ್ತೂರಿ ರಂಗನ್ ವರದಿ ಜಾರಿಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಲೇ ಇದೆ. ಈ ವರದಿ ಜಾರಿ ಸಂಬಂಧ ಬಾಧಿತ ಪ್ರದೇಶಗಳಲ್ಲಿ ವಿಶೇಷ ಗ್ರಾಮಸಭೆಯೂ ನಡೆಸಿ ಜನರ ಅಭಿಪ್ರಾಯ ಪಡೆದುಕೊಳ್ಳಲಾಗಿತ್ತು. ವರದಿ ಜಾರಿ ವಿರೋಧಿಸಿ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳಿಸಲಾಗಿತ್ತು. ಪಶ್ಚಿಮ ಘಟ್ಟಕ್ಕೆ ಬರುವ ಕಾನೂನನ್ನು ಜನವಸತಿ ಪ್ರದೇಶಕ್ಕೆ ಅನ್ವಯ ಆಗದಂತೆ ನೋಡಿಕೊಳ್ಳುವಂತದ್ದು ಸರಕಾರದ ಕರ್ತವ್ಯ ಆಗಿರುತ್ತದೆ ಎಂದು ಹೇಳಿದರು.


ಸಭೆಯಲ್ಲಿ ಕೊಂಬಾರು, ಸಿರಿಬಾಗಿಲು, ಶಿರಾಡಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿ ಹೋರಾಟ ನಡೆಸುವ ನಿರ್ಧಾರ ಕೈಗೊಂಡು ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಯಿತು.