ಕಡಬ ಟೈಮ್ಸ್ (KADABA TIMES): ಕಡಬ : ಯೋಜನಾ ಪ್ರಾಧಿಕಾರದ ಕಚೇರಿ ಕಡಬ ತಾಲೂಕು ಪಂಚಾಯತ್ನಲ್ಲಿ ಪ್ರಾರಂಭವಾಗಿ ಆರು ತಿಂಗಳು ಕಳೆದರೂ ಸಮರ್ಪಕವಾಗಿ ಇನ್ನೂ ಕಡತಗಳೂ ವಿಲೇವಾರಿ ಆಗಿಲ್ಲ. 285ಕ್ಕೂ ಹೆಚ್ಚು ಕಡತಗಳು ಧೂಳು ತಿನ್ನುತ್ತಿವೆ.


ಗ್ರಾ.ಪಂ, ನಗರ ಸ್ಥಳೀಯ ಸಂಸ್ಥೆಗಳಿಂದ ಭೂಪರಿವರ್ತಿತ 9/11 ವಿನ್ಯಾಸ ನಕ್ಷೆ ಅನುಮೋದನೆಯ ಅಧಿಕಾರವನ್ನು ಹಿಂಪಡೆದು ಯೋಜನಾ ಪ್ರಾಧಿಕಾರಕ್ಕೆ ನೀಡಿದ ಬಳಿಕ ಕಡಬದಲ್ಲಿ ಕಚೇರಿ ಇದ್ದರೂ ಅಧಿಕಾರಿಗಳ ಅನುಪಸ್ಥಿತಿಯಿಂದಾಗಿ ಸಾರ್ವಜನಿಕರು ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.


ಕಡಬದಲ್ಲಿ ಕಳೆದ ವರ್ಷ ಸೆ.27ರಿಂದ ಪ್ರಾರಂಭ ವಾದ ಕಚೇರಿಗೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೊಬ್ಬರು ವಾರದಲ್ಲಿ ಎರಡು ದಿನ ಭೇಟಿ ನೀಡಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರನ್ನು ಪುತ್ತೂರಿನಿಂದ ಇಲ್ಲಿಗೆ ನಿಯೋಜನೆ ಮಾಡಲಾಗಿತ್ತು. ಅವರಿಗೆ ಕಡಬ, ಸುಳ್ಯ, ಬಂಟ್ವಾಳ ಹಾಗೂ ಪುತ್ತೂರಿನ ಜವಾಬ್ದಾರಿ ಇತ್ತು. ಅವರು ವಾರಕ್ಕೆ ಎರಡು ದಿನ ಒಂದು ತಾಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಮೂರು ತಿಂಗಳು ಇಲ್ಲಿ ಕರ್ತವ್ಯ ನಿರ್ವಹಿಸಿ ಪದೋನ್ನತಿಗೊಂಡು ಶಿವಮೊಗ್ಗಕ್ಕೆ ವರ್ಗಾವಣೆಗೊಂಡ ಬಳಿಕ ಕಡಬಕ್ಕೆ ಮಂಗಳೂರಿನಿಂದ ಒಬ್ಬರು ಸದಸ್ಯ ಕಾರ್ಯದರ್ಶಿಯನ್ನು ನಿಯೋಜನೆಗೊಳಿಸಲಾಗಿತ್ತು.


ಅವರು ಒಂದು ತಿಂಗಳು ಕಾರ್ಯ ನಿರ್ವಹಿಸಿ ಆ ಬಳಿಕ ಕಾಣಿಸಿಕೊಂಡಿಲ್ಲ. ಅನಂತರ ಪುತ್ತೂರಿನಿಂದ ಒಬ್ಬರು ಇಲ್ಲಿಗೆ ನಿಯೋಜನೆ ಗೊಂಡರೂ ಅವರು ಇತ್ತ ತಲೆ ಹಾಕುತ್ತಿಲ್ಲ ಎಂಬ ಆರೋಪವಿದೆ. ಇದರಿಂದಾಗಿ ಏಕ ವಿನ್ಯಾಸ ನಕ್ಷೆ ಅರ್ಜಿ ಹಾಕಿದ ಜನಗಳಿಗೆ ತೊಂದರೆಯಾಗಿದೆ.
ಗ್ರಾಮ ಪಂಚಾಯತ್‌ನಿಂದ ಏಕ ವಿನ್ಯಾಸ ನಕ್ಷೆ ಅನುಮೋದನೆಗೆ ಕಡಬದ ಪ್ರಾಧಿಕಾರ ಕಚೇರಿಗೆ ಬಂದರೆ ಇಲ್ಲಿನ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಪಂಚಾಯತ್‌ನವರು ನೀಡಿದ ನಕ್ಷೆ ಸರಿ ಇದೆಯೇ ಎಂದು ದೃಢೀಕರಿಸಬೇಕು. ಅವರ ವರದಿಯ ಮೇಲೆ ಅಧಿಕಾರಿ ಅನುಮೋದನೆ ನೀಡುತ್ತಾರೆ. ವರದಿ ಸರಿ ಇಲ್ಲದಿದ್ದರೆ ಅದಕ್ಕೆ ಹಿಂಬರಹ ನೀಡಬೇಕು. ಇಷ್ಟು ಪ್ರಕ್ರಿಯೆಗೆ ಏನಿಲ್ಲವೆಂದರೂ ಎರಡು ತಿಂಗಳು ತೆಗೆದುಕೊಳ್ಳಲಾಗುತ್ತದೆ. ಕೆಲವರು ಅರ್ಜಿ ಹಾಕಿ ನಾಲ್ಕು ತಿಂಗಳಾದರೂ ಅವರಿಗೆ ಅನುಮೋದನೆ ದೊರೆಯದೆ ಸಂಕಷ್ಟದಲ್ಲಿದ್ದಾರೆ.


ಗ್ರಾಮೀಣ ಭಾಗದ ಬಡ ಜನತೆ ಮನೆ, ಕಟ್ಟಡ ನಿರ್ಮಾಣ, ಬ್ಯಾಂಕ್ ಸಾಲ ಪಡೆಯುವ ಉದ್ದೇಶದಿಂದ ಭೂ ಪರಿವರ್ತನೆ ವಿನ್ಯಾಸ ನಕ್ಷೆಗಾಗಿ ಈಗ ತಿಂಗಳುಗಟ್ಟಲೆ ಅಲೆಯುವಂತಾಗಿದೆ. ಈ ಸಮಸ್ಯೆ ಪರಿಹರಿಸುವ ಬಗ್ಗೆ ರಾಜ್ಯ ಸರಕಾರ ಆಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.