ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆಗೆ ಇತ್ತೀಚೆಗೆ ಜಾರಿಗೆ ತರಲಾಗಿದ್ದ ‘ಸಾಮೂಹಿಕ ಸಂಕಲ್ಪ’ ಪದ್ಧತಿಯ ವಿರುದ್ಧ ಭಕ್ತರು ಮತ್ತು ಮಾಜಿ ಆಡಳಿತ ಮಂಡಳಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟಕ್ಕೆ ಸಜ್ಜಾಗಿದ್ದ ಬೆನ್ನಲ್ಲೇ, ದೇವಸ್ಥಾನದ ಆಡಳಿತ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಿಂಪಡೆದು, ನಾಳೆಯಿಂದ (ಅಕ್ಟೋಬರ್ 28) ಮೊದಲಿನಂತೆಯೇ ಸಂಕಲ್ಪ ಮಂದಿರದಲ್ಲಿ ಸಾಂಪ್ರದಾಯಿಕ ಪ್ರತ್ಯೇಕ ಸಂಕಲ್ಪ ಸೇವೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಪ್ರಕಟಿಸಿದ್ದಾರೆ.

ಸುಬ್ರಹ್ಮಣ್ಯ: ಸರ್ಪದೋಷ ನಿವಾರಣಾ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯ ಶತಮಾನಗಳ ಸಾಂಪ್ರದಾಯಿಕ ‘ದಿಟ್ಟಂ’ ಬದಲಾಯಿಸಿ ಜಾರಿಗೆ ತರಲಾಗಿದ್ದ ಸಾಮೂಹಿಕ ಸಂಕಲ್ಪ ವ್ಯವಸ್ಥೆಯ ವಿವಾದಕ್ಕೆ ಕೊನೆಗೂ ತೆರೆಬಿದ್ದಿದೆ. ಭಕ್ತರ ಧಾರ್ಮಿಕ ಭಾವನೆಗಳು ಹಾಗೂ ತೀವ್ರ ಅಸಮಾಧಾನವನ್ನು ಗೌರವಿಸಿರುವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು, ನೂತನ ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ತಕ್ಷಣದಿಂದಲೇ ಹಿಂಪಡೆದಿದ್ದು, ಅಕ್ಟೋಬರ್ 28ರ ಬುಧವಾರದಿಂದ ಯಥಾಪ್ರಕಾರ ಸಂಕಲ್ಪ ಮಂದಿರದಲ್ಲೇ ಪ್ರತ್ಯೇಕ ಸಂಕಲ್ಪ ಸೇವೆ ನಡೆಸಲು ತೀರ್ಮಾನಿಸಿದೆ.
ಈ ಕುರಿತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಅಧಿಕೃತ ಪ್ರಕಟಣೆ ನೀಡಿದ್ದಾರೆ.
ವಿವಾದ ಮತ್ತು ಹೋರಾಟದ ಎಚ್ಚರಿಕೆಯ ಹಿನ್ನೆಲೆ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಪೂಜೆಗಳಿಗೆ ಭಕ್ತರಿಗೆ ಸಂಕಲ್ಪ ಮಂದಿರದಲ್ಲಿ ಒಬ್ಬೊಬ್ಬರಾಗಿಯೇ ಕುಳ್ಳಿರಿಸಿ ಪ್ರತ್ಯೇಕ ಸಂಕಲ್ಪ ಮಾಡಿಸುವ ಪ್ರಾಚೀನ ಪದ್ಧತಿ ಇತ್ತು. ಆದರೆ, ಇತ್ತೀಚೆಗೆ ಆಡಳಿತ ಮಂಡಳಿಯು ಈ ಪದ್ಧತಿಯನ್ನು ಬದಲಾಯಿಸಿ, ಪೂಜಾ ಸ್ಥಳದಲ್ಲೇ ಎಲ್ಲರಿಗೂ ಒಟ್ಟಾಗಿ ‘ಸಾಮೂಹಿಕ ಸಂಕಲ್ಪ’ ಮಾಡುವ ನಿಯಮ ಜಾರಿಗೆ ತಂದಿತ್ತು.
ಇದರಿಂದ ದೇವಾಲಯದ ಮೂಲ ದಿಟ್ಟಂ ಮತ್ತು ಭಕ್ತರ ನಂಬಿಕೆಗೆ ಧಕ್ಕೆಯಾಗಿದೆ ಎಂದು ಆಕ್ರೋಶಗೊಂಡಿದ್ದ ಭಕ್ತರು ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಅಕ್ಟೋಬರ್ 29ರಂದು ಸುಬ್ರಹ್ಮಣ್ಯದಲ್ಲಿ ಬೃಹತ್ ಪ್ರತಿಭಟನಾ ಪೂರ್ವಭಾವಿ ಸಭೆ ನಡೆಸಿ ಕಾನೂನುಬದ್ಧ ಹೋರಾಟ ನಡೆಸಲು ಸಜ್ಜಾಗಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಆಡಳಿತ ಮಂಡಳಿಯು ತಕ್ಷಣವೇ ಎಚ್ಚೆತ್ತುಕೊಂಡು ಈ ಆದೇಶವನ್ನು ವಾಪಸ್ ಪಡೆದುಕೊಂಡಿದೆ.
ಸಾಮೂಹಿಕ ಸಂಕಲ್ಪ ತರಲು ಆಡಳಿತ ಮಂಡಳಿ ನೀಡಿದ್ದ ಕಾರಣಗಳೇನು?


ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದು, ರಜಾದಿನಗಳು ಹಾಗೂ ಆಶ್ಲೇಷ ನಕ್ಷತ್ರದ ವಿಶೇಷ ದಿನಗಳಲ್ಲಿ ದಿನವೊಂದಕ್ಕೆ ಸುಮಾರು 2,000 ದಿಂದ 3,000 ಆಶ್ಲೇಷ ಬಲಿ ಪೂಜೆಗಳು ಮತ್ತು ಇತರ ಸೇವೆಗಳು ನಡೆಯುತ್ತವೆ. ಇದರಿಂದಾಗಿ ಭಕ್ತರು ಸಂಕಲ್ಪ ಮಂದಿರದಲ್ಲಿ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಇತ್ತು.
ಜೊತೆಗೆ, 2026ರ ಸೆಪ್ಟೆಂಬರ್ 20ರಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಕ್ಷೇತ್ರಕ್ಕೆ ಭೇಟಿ ನೀಡಿದ್ದ ವೇಳೆ, ಒಳಾಂಗಣದಲ್ಲಿ ಭಕ್ತರ ದಟ್ಟಣೆಯನ್ನು ಗಮನಿಸಿ, ನೂಕುನುಗ್ಗಲು ನಿಯಂತ್ರಿಸಲು ಮತ್ತು ಭಕ್ತರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಚಿಂತನೆ ನಡೆಸಿ ಸಾಮೂಹಿಕ ಸಂಕಲ್ಪವನ್ನು ಜಾರಿಗೆ ತರಲಾಗಿತ್ತು ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಒಬ್ಬ ಭಕ್ತನ ಮನಸ್ಸಿಗೂ ನೋವಾಗಬಾರದು: ಅಧ್ಯಕ್ಷ ಹರೀಶ್ ಇಂಜಾಡಿ ಸ್ಪಷ್ಟನೆ: “ಹೊಸದಾಗಿ ಜಾರಿಗೆ ತಂದಿದ್ದ ಸಾಮೂಹಿಕ ಸಂಕಲ್ಪ ವ್ಯವಸ್ಥೆಗೆ ಶೇ. 99ರಷ್ಟು ಭಕ್ತರು ಒಪ್ಪಿಗೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದಾಗ್ಯೂ, ಕುಕ್ಕೆ ಕ್ಷೇತ್ರಕ್ಕೆ ಶ್ರದ್ಧಾ-ಭಕ್ತಿಯಿಂದ ಬರುವ ಒಬ್ಬನೇ ಒಬ್ಬ ಭಕ್ತನ ಮನಸ್ಸಿಗೂ ನೋವಾಗಬಾರದು ಎಂಬುದು ನಮ್ಮ ಆಶಯ. ಭಕ್ತರ ಧಾರ್ಮಿಕ ಭಾವನೆಗಳಿಗೆ ಅಗ್ರ ಮನ್ನಣೆ ನೀಡುವುದು ಮತ್ತು ಪ್ರತಿಯೊಬ್ಬ ಭಕ್ತನಿಗೂ ತನ್ನ ಇಷ್ಟದಂತೆ ಭಕ್ತಿಪೂರ್ವಕವಾಗಿ ಸಂಕಲ್ಪ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಸಲುವಾಗಿ ಈ ಸಾಮೂಹಿಕ ಸಂಕಲ್ಪವನ್ನು ಹಿಂಪಡೆಯಲಾಗಿದೆ. ಅಕ್ಟೋಬರ್ 28 ರಿಂದ ಮೊದಲಿನಂತೆಯೇ ಸಂಕಲ್ಪ ಮಂದಿರದಲ್ಲೇ ಪ್ರತ್ಯೇಕ ಸಂಕಲ್ಪ ಸೇವೆಗಳು ಪುನರಾರಂಭಗೊಳ್ಳಲಿವೆ” ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.
ಆಡಳಿತ ಮಂಡಳಿಯು ವಿವಾದಿತ ನಿಯಮವನ್ನು ಹಿಂಪಡೆದು ಹಳೆಯ ಪದ್ಧತಿಯನ್ನೇ ಮುಂದುವರಿಸಲು ನಿರ್ಧರಿಸಿರುವುದು ಸುಬ್ರಹ್ಮಣ್ಯ ಭಕ್ತ ವಲಯದಲ್ಲಿ ಸಂತಸ ಮತ್ತು ನೆಮ್ಮದಿ ಮೂಡಿಸಿದೆ.
