ಧರ್ಮಸ್ಥಳ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಗರಗಸಪಾಲ್ ಎಂಬಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಮಣ್ಣು ರಸ್ತೆಗೆ ಇಳಿದು ಸ್ಕಿಡ್ ಆದ ಪರಿಣಾಮ ಸಹಸವಾರೆ ಯುವತಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ:ಧರ್ಮಸ್ಥಳ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಗರಗಸಪಾಲ್ ಸಮೀಪ ಅಕ್ಟೋಬರ್ 25ರ ಭಾನುವಾರ ಬೆಳಿಗ್ಗೆ ಸ್ಕೂಟರ್ ನಿಯಂತ್ರಣ ತಪ್ಪಿ ಸ್ಕಿಡ್ ಆದ ಪರಿಣಾಮ ಸಹಸವಾರೆಯಾಗಿದ್ದ ಯುವತಿಯೊಬ್ಬರು ಗಾಯಗೊಂಡ ಘಟನೆ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡ ಯುವತಿಯನ್ನು ಕಡಬ ತಾಲೂಕಿನ ರೆಖ್ಯ ಗ್ರಾಮದ ನಿವಾಸಿ ಕುಮಾರಿ ಮನ್ವಿತಾ (20) ಎಂದು ಗುರುತಿಸಲಾಗಿದೆ.
ದೂರಿನ ವಿವರಗಳ ಪ್ರಕಾರ, ಅಕ್ಟೋಬರ್ 25ರಂದು ಬೆಳಿಗ್ಗೆ ಮನ್ವಿತಾ ಅವರು ತಮ್ಮ ತಂದೆಯ ಮಾಲಕತ್ವದ ಸ್ಕೂಟರ್ನಲ್ಲಿ ಸಹಸವಾರೆಯಾಗಿ ಕುಳಿತುಕೊಂಡಿದ್ದರು. ಕುಸುಮಾಧರ ಎಂಬವರು ಸ್ಕೂಟರ್ ಚಲಾಯಿಸಿಕೊಂಡು ಕಲ್ಲುಗುಡ್ಡೆ ಪೇಟೆಗೆ ತೆರಳಿ, ಅಲ್ಲಿಂದ ಪೇರಡ್ಕ ಪೆಟ್ರೋಲ್ ಪಂಪ್ಗೆಂದು ಧರ್ಮಸ್ಥಳ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಮೂಲಕ ಹೊರಟಿದ್ದರು.
ಸ್ಕೂಟರ್ ರೆಂಜಿಲಾಡಿ ಗ್ರಾಮದ ಗರಗಸಪಾಲ್ ತಲುಪಿದಾಗ, ಚಾಲಕನ ಆಯತಪ್ಪಿ ವಾಹನವು ರಸ್ತೆಯ ಎಡಬದಿಯ ಮಣ್ಣು ರಸ್ತೆಗೆ ಇಳಿದಿದೆ. ತಕ್ಷಣ ನಿಯಂತ್ರಣ ತಪ್ಪಿ ಸ್ಕೂಟರ್ ಸ್ಕಿಡ್ ಆಗಿ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.


ಅಪಘಾತದ ವೇಳೆ ಸ್ಕೂಟರ್ ಸವಾರ ಕುಸುಮಾಧರ ಅವರಿಗೆ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ. ಆದರೆ, ಸ್ಕೂಟರ್ ರಸ್ತೆಗೆ ಬಿದ್ದ ರಭಸಕ್ಕೆ ಮನ್ವಿತಾ ಅವರ ಬಲಗಾಲಿನ ಮೇಲೆ ಬಿದ್ದ ಪರಿಣಾಮ ಅವರ ಬಲ ಪಾದ ಮತ್ತು ಕಾಲಿನ ಮಣಿಗಂಟಿಗೆ ರಕ್ತಗಾಯ ಹಾಗೂ ತೀವ್ರ ಪೆಟ್ಟಾಗಿದೆ.
ತಕ್ಷಣವೇ ಕುಸುಮಾಧರ ಅವರು ಸ್ಥಳೀಯರ ನೆರವಿನಿಂದ ಮನ್ವಿತಾ ಅವರನ್ನು ಅದೇ ಸ್ಕೂಟರ್ನಲ್ಲಿ ಕೊಕ್ಕಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನೆಗೆ ಸಂಬಂಧಿಸಿದಂತೆ ಗಾಯಾಳು ಮನ್ವಿತಾ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಸವಾರ ಕುಸುಮಾಧರ ಅವರ ವಿರುದ್ಧ ಅಪರಾಧ ಕ್ರಮಾಂಕ 123/2026 ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 281 (ಸಾರ್ವಜನಿಕ ರಸ್ತೆಯಲ್ಲಿ ಅಜಾಗರೂಕ ಚಾಲನೆ) ಹಾಗೂ 125(a) (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ತರುವಂತೆ ಗಾಯ ಉಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
