ಕಡಬ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ತಹಸೀಲ್ದಾರ್ ಗಣೇಶ್ ಸವಣೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದು, ಎಸ್ಎಸ್ಎಲ್ಸಿಯಲ್ಲಿ ಅತ್ಯುನ್ನತ ಅಂಕ ಗಳಿಸಿದ ವಾಲ್ಮೀಕಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಡಬ: ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಕಡಬ ತಾಲೂಕು ಕಚೇರಿಯ ಸಭಾಂಗಣದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಕಡಬ ತಹಸೀಲ್ದಾರ್ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಗಣೇಶ್ ಸವಣೂರು ಅವರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ಮೌಲ್ಯಾಧಾರಿತ ಬದುಕಿಗೆ ವಾಲ್ಮೀಕಿ ಪ್ರೇರಣೆ : ತಹಸೀಲ್ದಾರ್ ಗಣೇಶ್ ಸವಣೂರು ಅವರು ಮಾತನಾಡಿ , ಪರಿಶಿಷ್ಟ ಸಮುದಾಯದಲ್ಲಿ ಜನಿಸಿ, ಇಡೀ ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಗೆ ಭದ್ರ ಅಡಿಪಾಯ ಹಾಕಿದ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಆಚರಿಸುವ ಮೂಲಕ ಅವರ ಸಮುದಾಯಕ್ಕೆ ಸಮಾಜದಲ್ಲಿ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ” ಎಂದು ತಿಳಿಸಿದರು.


ಎಸ್ಎಸ್ಎಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಸಾಧನೆ ಮೆರೆದ ವಾಲ್ಮೀಕಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಾದ ಚೈತನ್ಯ ಪಿ., ವಂಶಿ ಪಿ. ಹಾಗೂ ಶ್ರೀಶ ವೀರಪ್ಪ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ, ಕಡಬ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ. ಹನೀಫ್ ಹಾಗೂ ಪ.ಪಂ. ಸದಸ್ಯ ದಯಾನಂದ ಗೌಡ ಶುಭ ಹಾರೈಸಿದರು. ಉಪತಹಸೀಲ್ದಾರ್ ಶಾಯದುಲ್ಲಾ ಖಾನ್, ಸಮಾಜ ಕಲ್ಯಾಣಾಧಿಕಾರಿ ಲೋಕೇಶ್, ಕಚೇರಿ ಸಿಬ್ಬಂದಿಗಳಾದ ಆತ್ಮಾನಂದ, ಭಾರತಿ, ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಗ್ರಾಮ ಸೇವಕ ಉದಯ ಕುಮಾರ್ ಸ್ವಾಗತಿಸಿದರು. ಕಚೇರಿ ಸಿಬ್ಬಂದಿ ಕೌಶಿಕ್ ಕುಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
