ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಮೂಹಿಕ ಸಂಕಲ್ಪ ಪದ್ಧತಿಗೆ ಮುಂದಾದ ಆಡಳಿತ ಮಂಡಳಿ, ಭಕ್ತರ ಆಕ್ರೋಶ, ಹೋರಾಟ ಸಭೆಗೆ ಡೇಟ್ ಫಿಕ್ಸ್

ಸರ್ಪದೋಷ ನಿವಾರಣಾ ಪುಣ್ಯಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯ ಸಾಂಪ್ರದಾಯಿಕ ‘ದಿಟ್ಟಂ’ ಬದಲಾಯಿಸಿ, ಪ್ರತ್ಯೇಕ ಸಂಕಲ್ಪದ ಬದಲು ‘ಸಾಮೂಹಿಕ ಸಂಕಲ್ಪ’ ಜಾರಿಗೆ ತಂದಿರುವ ಆಡಳಿತ ಸಮಿತಿಯ ನಿರ್ಧಾರಕ್ಕೆ ಭಕ್ತ ವಲಯ ಹಾಗೂ ಸ್ಥಳೀಯರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಹಿಂದೂ ಧಾರ್ಮಿಕ ಆಚರಣೆಗೆ ಧಕ್ಕೆ ತರುವ ಈ ಏಕಪಕ್ಷೀಯ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ಅಕ್ಟೋಬರ್ 29ರಂದು ಸುಬ್ರಹ್ಮಣ್ಯದಲ್ಲಿ ಹೋರಾಟದ ಪೂರ್ವಭಾವಿ ಸಭೆ ಕರೆಯಲಾಗಿದೆ.

kadaba times

ಸುಬ್ರಹ್ಮಣ್ಯ: ನಾಗಾರಾಧನೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದ್ದ ಪವಿತ್ರ ಆಶ್ಲೇಷ ಬಲಿ ಪೂಜೆಯ ‘ದಿಟ್ಟಂ’ ಅನ್ನು ದಿಢೀರನೆ ಬದಲಾಯಿಸಿರುವ ಕ್ಷೇತ್ರದ ಆಡಳಿತ ಮತ್ತು ವ್ಯವಸ್ಥಾಪನಾ ಸಮಿತಿಯ ಕ್ರಮದ ವಿರುದ್ಧ ಭಕ್ತರು ಹಾಗೂ ಹಿಂದಿನ ಆಡಳಿತ ಮಂಡಳಿ ಸದಸ್ಯರು ಸಿಡಿದೆದ್ದಿದ್ದಾರೆ. ಸಾಂಪ್ರದಾಯಿಕ ಪ್ರತ್ಯೇಕ ಸಂಕಲ್ಪದ ಬದಲು ಸಾಮೂಹಿಕ ಸಂಕಲ್ಪ ಪದ್ಧತಿ ಜಾರಿಗೆ ತಂದಿರುವುದು ಭಕ್ತರ ಧಾರ್ಮಿಕ ನಂಬಿಕೆಗೆ ಮಾಡಿದ ಅಪಚಾರ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದ್ದು, ಇದರ ವಿರುದ್ಧ ವ್ಯಾಪಕ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.

ವಿವಾದಕ್ಕೆ ಕಾರಣವೇನು?: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆ ಹಾಗೂ ನಾಗಪ್ರತಿಷ್ಠೆ ನೆರವೇರಿಸುವ ಭಕ್ತರಿಗೆ ಸಂಕಲ್ಪ ಮಂದಿರದಲ್ಲಿ ಪ್ರತ್ಯೇಕವಾಗಿ (ಒಬ್ಬೊಬ್ಬರ ಗೋತ್ರ, ನಕ್ಷತ್ರ ಮತ್ತು ಸಂಕಲ್ಪದ ಉದ್ದೇಶ ಹೇಳಿ) ಸಂಕಲ್ಪ ಮಾಡಿಸುವ ಪ್ರಾಚೀನ ಪದ್ಧತಿ ಇತ್ತು.

ಆದರೆ, ಪ್ರತ್ಯೇಕ ಸಂಕಲ್ಪದಿಂದ ಸಂಕಲ್ಪ ಮಂದಿರದಲ್ಲಿ ಭಕ್ತರ ನೂಕುನುಗ್ಗಲು ಉಂಟಾಗುತ್ತಿದೆ ಹಾಗೂ ತೊಂದರೆಯಾಗುತ್ತಿದೆ ಎಂಬ ಸಾರ್ವಜನಿಕ ದೂರುಗಳನ್ನು ಮುಂದಿಟ್ಟುಕೊಂಡ ಕ್ಷೇತ್ರದ ಪ್ರಸ್ತುತ ವ್ಯವಸ್ಥಾಪನಾ ಸಮಿತಿಯು, ಪ್ರತ್ಯೇಕ ಸಂಕಲ್ಪವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಬದಲಾಗಿ, ಆಶ್ಲೇಷ ಬಲಿ ಪೂಜೆ ನಡೆಯುವ ಸ್ಥಳದಲ್ಲೇ ಎಲ್ಲರಿಗೂ ಒಟ್ಟಾಗಿ ‘ಸಾಮೂಹಿಕ ಸಂಕಲ್ಪ’ ಮಾಡಿಸುವ ಹೊಸ ಪದ್ಧತಿಯನ್ನು ಜಾರಿಗೆ ತಂದಿದೆ.

ಆಡಳಿತದ ಪಿತೂರಿ ಆರೋಪ – ಧಾರ್ಮಿಕ ನಂಬಿಕೆಗೆ ಪೆಟ್ಟು: ಆಡಳಿತ ಸಮಿತಿಯ ಈ ಏಕಾಏಕಿ ನಿರ್ಧಾರಕ್ಕೆ ಕ್ಷೇತ್ರದ ಹಿರಿಯರು, ಪುರೋಹಿತರು ಹಾಗೂ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. “ಆಶ್ಲೇಷ ಬಲಿ ಪೂಜೆ ಕೂರುವ ಮುನ್ನವೇ ಸಂಕಲ್ಪ ಮಂದಿರದಲ್ಲಿ ನಿಷ್ಠೆಯಿಂದ ಸಂಕಲ್ಪ ಮಾಡಿ ಪೂಜಾ ಮಂಟಪಕ್ಕೆ ತೆರಳುವುದು ದೇವಸ್ಥಾನದ ಮೂಲ ದಿಟ್ಟಂ ಆಗಿದೆ. ಅದನ್ನು ತಕ್ಷಣವೇ ಮೊಟಕುಗೊಳಿಸಿರುವುದು ಹಿಂದೂ ಪದ್ಧತಿಯ ಆಚರಣೆಗಳನ್ನು ನಾಶಮಾಡುವ ಅಧಿಕಾರಿಗಳ ಹುನ್ನಾರ” ಎಂದು ಭಕ್ತರು ದೂರಿದ್ದಾರೆ.

uniq
kadaba times

ಅಕ್ಟೋಬರ್ 29ಕ್ಕೆ ಸುಬ್ರಹ್ಮಣ್ಯದಲ್ಲಿ ಬೃಹತ್ ಹೋರಾಟ ಸಭೆ: ದೇವಸ್ಥಾನದ ಪಾವಿತ್ರ್ಯತೆ ಮತ್ತು ಮೂಲ ದಿಟ್ಟಂ ಉಳಿಸಿಕೊಳ್ಳಲು ಭಕ್ತರು ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಒಗ್ಗೂಡಿ ಬೀದಿಗಿಳಿಯಲು ಸಿದ್ಧತೆ ನಡೆಸಿದ್ದಾರೆ. ಸಾಂಪ್ರದಾಯಿಕ ಪದ್ಧತಿಯನ್ನು ಮರುಜಾರಿಗೊಳಿಸಲು ಆಡಳಿತ ಮಂಡಳಿಗೆ ಗಡುವು ನೀಡುವ ಸಲುವಾಗಿ ಅಕ್ಟೋಬರ್ 29ರಂದು ಸುಬ್ರಹ್ಮಣ್ಯದಲ್ಲಿ ಹೋರಾಟದ ಮಹತ್ವದ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಪ್ರಮುಖರಾದ ಕಿಶೋರ್ ಶಿರಾಡಿ ಮತ್ತು ಜಯಪ್ರಕಾಶ್ ಕೂಜುಗೋಡು ತಿಳಿಸಿದ್ದಾರೆ.

“ಪ್ರತಿಯೊಬ್ಬ ಭಕ್ತರ ಸಂಕಲ್ಪವೂ ವಿಭಿನ್ನ; ಸಾಮೂಹಿಕ ಸಂಕಲ್ಪ ಅಸಾಧ್ಯ”:

“ಆಶ್ಲೇಷ ಬಲಿ ಪೂಜೆ ಮಾಡಿಸುವಾಗ ಪ್ರತಿಯೊಬ್ಬ ಭಕ್ತನಿಗೂ ಆತನದ್ದೇ ಆದ ಸಂಕಷ್ಟ, ಬೇಡಿಕೆ ಹಾಗೂ ಕಾರಣಗಳಿರುತ್ತವೆ. ಪ್ರತಿಯೊಬ್ಬರ ಗೋತ್ರ, ಪ್ರವರ, ಸಮಸ್ಯೆಗಳೇ ಬೇರೆ ಇರುವಾಗ ಎಲ್ಲರಿಗೂ ಒಂದೇ ಸಾಮೂಹಿಕ ಸಂಕಲ್ಪ ಮಾಡಲು ಹೇಗೆ ಸಾಧ್ಯ? ಆದ್ದರಿಂದ ಆಶ್ಲೇಷ ಬಲಿ ಪೂಜೆಯಲ್ಲಿ ಪ್ರತ್ಯೇಕ ಸಂಕಲ್ಪವನ್ನು ಆಡಳಿತ ಮಂಡಳಿ ತಕ್ಷಣವೇ ಮರು ಜಾರಿ ಮಾಡಬೇಕು. ದೇವಾಲಯದ ಮೂಲ ದಿಟ್ಟಂಗೆ ವಿರುದ್ಧವಾದ ಈ ಅವೈಜ್ಞಾನಿಕ ಸಾಮೂಹಿಕ ಸಂಕಲ್ಪವನ್ನು ಕೈಬಿಡದಿದ್ದರೆ ಭಕ್ತರೊಂದಿಗೆ ಸೇರಿ ಕಾನೂನಾತ್ಮಕ ಹಾಗೂ ನ್ಯಾಯಬದ್ಧ ಹೋರಾಟ ನಡೆಸಲಾಗುವುದು.”

— ಪ್ರಸನ್ನ ದರ್ಬೆ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ.

Related Articles

Latest Articles