ಕಡಬ ಟೈಮ್ (KADABA TIMES): ಪುಣ್ಯ ಕ್ಷೇತ್ರಗಳ ಬಳಿ ಇರುವ ನದಿಗಳು ತ್ಯಾಜ್ಯಗಳಿಂದ ಆವೃತವಾಗುತ್ತಿದ್ದು ಸ್ಥಳೀಯಾಡಳಿತ ಮತ್ತು ಆಡಳಿತ ಮಂಡಳಿಗೆ ನಿಭಾಯಿಸುವುದೇ ಸವಾಲಿನ ಕೆಲಸವಾಗಿದೆ.


ಕ್ಷೇತ್ರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಲ್ಲಿ ತ್ಯಾಜ್ಯ ಎಸೆಯದಂತೆ ಸೂಚನೆ, ಎಚ್ಚರಿಕೆ,ತಿಳುವಳಿಕೆ ನೀಡಿದರೂ ಕ್ಯಾರೇ ಎನ್ನದಂತಹ ಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಯಾವುದಾದರೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸ್ವಚ್ಚತೆ ಮಾಡಿ ಗಮನ ಸೆಳೆದಿದ್ದರು.


ಇದೀಗ ಮಾ.26ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಧಿಕಾರಿಗಳೇ ನದಿಗಿಳಿದು ತ್ಯಾಜ್ಯಗಳನ್ನು ಸಂಗ್ರಹಿಸಿ ಭಕ್ತ ಸಮೂಹಕ್ಕೆ ಸ್ವಚ್ಛತೆಯ ಪ್ರಜ್ಞೆ ಮೂಡಿಸಿದ್ದಾರೆ.


ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಏಸುರಾಜ್ ಸೇರಿದಂತೆ ದೇಗುಲದ ಅಧಿಕಾರಿವರ್ಗ ಮತ್ತು150ಕ್ಕೂ ಹೆಚ್ಚು ಸಿಬ್ಬಂದಿಗಳು ಕುಮಾರಧಾರ ನದಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು
ತ್ಯಾಜ್ಯ ರಾಶಿಯನ್ನು ಸ್ಥಳೀಯ ಗ್ರಾಮ ಪಂಚಾಯಿತ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ರವಾನಿಸಲಾಗಿದೆ


ದೇಗುಲದ ನೌಕರರು ನೀರಿನಿಂದ ಎಷ್ಟೇ ತ್ಯಾಜ್ಯಗಳನ್ನು ಹೊರತೆಗೆದರೂ ಭಕ್ತಾದಿಗಳು ನೀರಲ್ಲೇ ಬಟ್ಟೆಗಳನ್ನು ಎಸೆಯುವ ಚಾಳಿ ಮುಂದುವರಿಸುತ್ತಿರುವುದು ನೋವಿನ ವಿಚಾರ. ಇದಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳ ಮೂಲಕವೇ ನಿಯಂತ್ರಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಸಾರ್ವಜನಿಕರು.