ಕಡಬ ಟೈಮ್, (KADABA TIMES): ಭಾರಿ ಗಾಳಿಯಿಂದಾಗಿ ಭಾರೀ ಎತ್ತರದ ತೇರು(ಕುರ್ಜು) ಉರುಳಿ ಬಿದ್ದು ಅವಘಡ ಸಂಭವಿಸಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನ ಹುಸ್ಕೂರಿನ ಗ್ರಾಮ ದೇವತೆ ಮದ್ದೂರಮ್ಮ ಜಾತ್ರೆಯಲ್ಲಿ ನಡೆದಿದೆ.


ಮಾ.22ರಂದು ಸಂಜೆ ಈ ಅವಘಡ ನಡೆದಿದ್ದು ಜಾತ್ರೋತ್ಸವಕ್ಕೆ ಭಾರಿ ಸಂಖ್ಯೆಯ ಜನರು ಸೇರಿದ್ದ ವೇಳೆಯೇ ತೇರು ಗಾಳಿಯ ರಭಸಕ್ಕೆ ನಿಯಂತ್ರಣಕ್ಕೆ ಸಿಗದೇ ಏಕಾಏಕಿ ಉರುಳಿ ಬಿದ್ದಿದೆ. ಅವಘಡದಲ್ಲಿ ಓರ್ವ ವ್ಯಕ್ತಿ ಸಾ*ವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ


ಮೃ*ತ ದುರ್ದೈವಿ ತಮಿಳುನಾಡಿನ ಹೊಸೂರು ಮೂಲದವರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡ ನಡೆದ ಬಳಿಕ ಜನರು ಕಂಗಾಲಾಗಿದ್ದಾರೆ. ಧಾರ್ಮಿಕ ಕಾರ್ಯದ ವೇಳೆ ಕುರ್ಜು ಮಗುಚಿ ಬಿದ್ದದ್ದು ಭಕ್ತರನ್ನು ತೀವ್ರ ಚಿಂತೆಗೀಡು ಮಾಡಿದೆ.


ನಾಗಮಂಗಲ ಮತ್ತು ರಾಯಸಂದ್ರ ಗ್ರಾಮದ ಭಕ್ತರು ಕುರ್ಜು ನಿರ್ಮಾಣ ಮಾಡಿ ತಂದಿದ್ದರು ಎಂದು ತಿಳಿದು ಬಂದಿದೆ. ಕುರ್ಜು ಗಳನ್ನು ಭಕ್ತರು ಪೈಪೋಟಿಗೆ ಬಿದ್ದಂತೆ ಎತ್ತರ ಮಾಡುತ್ತಾ ಹೋಗುವುದು ಅವಘಡಕ್ಕೆ ಕಾರಣವಾಗಿದೆ ಎನ್ನಲಾಗಿದೆ.


ಕುರ್ಜು ನಿರ್ಮಾಣ ಮಾಡಿ ಕಿಲೋ ಮೀಟರ್ ಗಳಷ್ಟು ದೂರ ಸಾಂಪ್ರದಾಯಿಕವಾಗಿ ಎತ್ತುಗಳು, ಟ್ರ್ಯಾಕ್ಟರ್ ಗಳನ್ನೂ ಬಳಸಿ ಎಳೆದು ತರಲಾಗುತ್ತದೆ.ಕಳೆದ ವರ್ಷವೂ ಪಕ್ಕದ ಹೀಲಲಿಗೆ ಗ್ರಾಮದ ಕುರ್ಜು ಧರೆಗೆ ಉರುಳಿತ್ತು ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ .