ಕಡಬ ಟೈಮ್, (KADABA TIMES): ಕಡಬ :ಕೋಡಿಂಬಾಳ ಮತ್ತು ಕೇನ್ಯ ಗ್ರಾಮಗಳ ನಡುವೆ ಹರಿಯುತ್ತಿರುವ ಕುಮಾರಧಾರಾ ನದಿಗೆ ಮಜ್ಜಾರು ಕಡವು ಎಂಬಲ್ಲಿ ಗ್ರಾಮಸ್ಥರೇ ಸೇರಿಕೊಂಡು ಶ್ರಮದಾನದ ಮೂಲಕ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಈಗ ಸಂಚಾರ ಮುಕ್ತವಾಗಿದೆ.


ಮಾ. 23ರಂದು ಊರಿನ ಗಣ್ಯರು,ಗ್ರಾಮಸ್ಥರ ಮುಂದಾಳತ್ವದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಈ ಸೇತುವೆಯನ್ನು ಉದ್ಘಾಟನೆಯಾಗಿದೆ.ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಜೊತೆಗಿದ್ದರು.


ಗ್ರಾಮಸ್ಥರೇ ಸೇರಿಕೊಂಡು ಕುಮಾರಧಾರಾ ನದಿಯ ಮಚ್ಚಾರುಕಡವು ಎಂಬಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿಕೊಂಡಿದ್ದಾರೆ. ಈ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕಾಗಿ ಸಮಿತಿಯನ್ನು ರಚಿಸಿ ಗ್ರಾಮಸ್ಥರ ಸಹಕಾರ ಪಡೆದು ದೇಣಿಗೆ ಸಂಗ್ರಹಿಸಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಕಲ್ಲು ಮಣ್ಣು ಮರಳು ಮತ್ತು ಸುಮಾರು 22 ಸಿಮೆಂಟ್ ಪೈಪು ಮುಂತಾದ ಪರಿಕರಗಳನ್ನು ಬಳಸಿ ಬೇಸಗೆಯಲ್ಲಿ ಮಾತ್ರ ಉಪಯೋಗಕ್ಕೆ ಬರುವ ಸುಮಾರು 200 ಮೀ. ಉದ್ದದ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದಾರೆ .


ಈ ಸಂಪರ್ಕ ಸೇತುವೆಯಿಂದಾಗಿ ಕೇನ್ಯ, ಬಳ್ಳ ಗ್ರಾಮಗಳ ಜನರಿಗೆ ತಾಲೂಕು ಕೇಂದ್ರ ಕಡಬ, ಕೋಡಿಂಬಾಳ ರೈಲು ನಿಲ್ದಾಣ ಹತ್ತಿರವಾಗಲಿದೆ. ಪ್ರಸಿದ್ದ ಪ್ರವಾಸಿ ಮತ್ತು ಕಾರಣಿಕ ಕ್ಷೇತ್ರಗಳಾದ ಮಜ್ಜಾರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ಮಂಗಳೂರು ಸುಳ್ಯ, ಮಡಿಕೇರಿ, ಕೇರಳ ಕಡೆಗೂ ಸಂಪರ್ಕ ಸುಲಭವಾಗಿದೆ. ಇಲ್ಲಿ ಶಾಶ್ವತ ಸೇತುವೆಯ ಬೇಡಿಕೆಗೆ ಆಗ್ರಹ ಹೆಚ್ಚಾಗಿದೆ.


ಸಂಸದರ ಆದರ್ಶ ಗ್ರಾಮ ಬಳ್ಳ ಮತ್ತು ಕೇನ್ಯ ಗ್ರಾಮಸ್ಥರು ಆಸ್ಪತ್ರೆ, ತಾಲೂಕು ಕಚೇರಿ, ವ್ಯಾಪಾರ ವ್ಯವಹಾರ, ಶಾಲಾ ಕಾಲೇಜು ಸೇರಿದಂತೆ ತಮ್ಮ ಅಗತ್ಯತೆಗಳಿಗಾಗಿ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸಬೇಕಾದರೆ ಸುಳ್ಯ ತಾಲೂಕಿನ ಪಂಜ ಮೂಲಕ ಸುಮಾರು 20ಕಿ.ಮೀ. ಸುತ್ತುಬಳಸಿ ಸಂಚರಿಸಬೇಕು. ಆದರೆ ತಮ್ಮ ಗ್ರಾಮದಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಯನ್ನು ದಾಟಿ ಕೇವಲ 6 ಕಿ.ಮೀ. ಕ್ರಮಿಸಿದರೆ ಕಡಬ ತಾಲೂಕು ಕೇಂದ್ರವನ್ನು ಮತ್ತು 3 ಕಿ.ಮೀ ಸಂಚರಿಸಿದರೆ ಮಂಗಳೂರು -ಬೆಂಗಳೂರು ನಡುವಿನ ಕೋಡಿಂಬಾಳ ರೈಲು ನಿಲ್ದಾಣವನ್ನು ತಲುಪಲು ಸಾಧ್ಯವಿದೆ.