ಕಡಬ ಟೈಮ್, (kadaba times); ಟೆಲಿಗ್ರಾಂನಲ್ಲಿ ಟಾಸ್ಕ್ ಕಂಪ್ಲೀಟ್ ಮಾಡಲು ಹೋದ ನೆಲ್ಯಾಡಿ ಸಮೀಪದ ಗೋಳಿತೊಟ್ಟಿನ ಯುವತಿ 9.97 ಲಕ್ಷ ರೂ.ಕಳೆದುಕೊಂಡಿದ್ದು, ಈ ಬಗ್ಗೆ ಯುವತಿ ದೂರಿನಂತೆ ಮಂಗಳೂರಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಉಪ್ಪಿನಂಗಡಿಯಲ್ಲಿ ಉದ್ಯೋಗಿಯಾಗಿರುವ ಯುವತಿಗೆ ಫೆ. 15ರಂದು ಟೆಲಿಗ್ರಾಂನಲ್ಲಿ ಟಾಸ್ಕ್ ಕಂಪ್ಲೀಟ್ ಮಾಡಿದರೆ ಹಣ ನೀಡುವುದಾಗಿ ತಿಳಿಸಿದ್ದರು. ಟೆಲಿಗ್ರಾಂ ಖಾತೆಗಳಿಂದ ಟಾಸ್ಕ್ ಮಾಡುವ ಬಗ್ಗೆ ಮಾಹಿತಿ ನೀಡಿ ಯುವತಿಯ ಬ್ಯಾಂಕ್ ಖಾತೆ ವಿವರ ತೆಗೆದುಕೊಂಡು ಟಾಸ್ಕ್ ಕಂಪ್ಲೀಟ್ ಮಾಡಿದ್ದಕ್ಕೆ 150 ರೂ., 250 ರೂ.ಕಳುಹಿಸಿದ್ದರು.




ಯುವತಿ ಆರು ಟಾಸ್ಕ್ ಕಂಪ್ಲೀಟ್ ಮಾಡಿದ ಬಳಿಕ ಹಣ ಡೆಪಾಸಿಟ್ ಮಾಡಲು ತಿಳಿಸಿದ್ದು, ಅದರಂತೆ ಯುವತಿ 1 ಸಾವಿರ ರೂ.ಕಳುಹಿಸಿದ್ದಕ್ಕೆ 1,300 ರೂ., 2,000 ರೂ. ಕಳುಹಿಸಿದ್ದಕ್ಕೆ 2,600 ರೂ., 3,000 ರೂ. ಕಳುಹಿಸಿದ್ದಕ್ಕೆ 3900 ರೂ., 10 ಸಾವಿರ ರೂ. ಕಳುಹಿಸಿದ್ದಕ್ಕೆ 13 ಸಾವಿರ ರೂ.ಯುವತಿಯ ಖಾತೆಗೆ ಬಂದಿದೆ.


ಅನಂತರ ಹಂತಹಂತವಾಗಿ ಒಟ್ಟು 9,97,450 ರೂ. ಅನ್ನು ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದು, ಬಳಿಕ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.