ಕಡಬ ಟೈಮ್ಸ್: ದೀಪಾವಳಿಯ ಬಲಿಪಾಡ್ಯಮಿಯಂದು ಗೋವುಗಳಿಗೆ ಪೂಜೆಯನ್ನೂ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗೋಪೂಜೆ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಯಲ್ಲಿರುವ ದನ ಕರುಗಳಿಗೆ ಅಲಂಕರಿಸಿ, ಅವುಗಳಿಗೆ ಶಾಸ್ತ್ರೋಕ್ತ ಪೂಜೆ ಮಾಡಿ, ತಿಂಡಿ- ತಿನಿಸುಗಳನ್ನು ನೀಡುವ ಸಂಪ್ರದಾಯವಿದೆ.
ಇಂತಹ ಸಾಂಪ್ರದಾಯಿಕ ಆಚರಣೆ ಹಲವೆಡೆ ನಡೆದಿದ್ದು, ಕಡಬ ತಾಲೂಕಿನ ಕೊಯಿಲ ಗ್ರಾಮದ ಸಬಳೂರಿನಲ್ಲಿ ಸಾಮೂಹಿಕ ಗೋಪೂಜೆ ನಡೆದಿದೆ.ಅಯೋದ್ಯ ನಗರದ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ದೀಪಾವಳಿ ಕ್ರೀಡೋತ್ಸವ ಮತ್ತು ಗೋಪೂಜೆಯು ಗುರುವಾರ ನಡೆದಿದೆ.
ತಾ.ಪಂ ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ ಉದ್ಘಾಟಿಸಿದ್ದಾರೆ.
ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಗೌಡ ಸಮಯೋಚಿತವಾಗಿ ಮಾತನಾಡಿದರು.ಗೆಳೆಯರ ಬಳಗದ ಗೌರವಾಧ್ಯಕ್ಷ ಗಣೇಶ್ ಎರ್ಮಡ್ಕ ಅಧ್ಯಕ್ಷತೆ ವಹಿಸಿದ್ದರು. ಗೆಳೆಯರ ಬಳಗದ ಅಧ್ಯಕ್ಷ ಪ್ರಶಾಂತ್ ಸಬಳೂರು , ಕಾರ್ಯದರ್ಶಿ ಗುರುಪ್ರಸಾದ್ ಪಟ್ಟೆದಮೂಲೆ ಉಪಸ್ಥಿತರಿದ್ದರು. ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಪವಿತ್ರಪಾಣಿ ವೆಂಕಟ್ರಮಣ ಕುದುರೆತ್ತಾಯ ಧಾರ್ಮಿಕ ವಿಧಿವಿಧಾನಾಗಳೊಂದಿಗೆ ಗೋಪೂಜೆ ನೆರವೇರಿಸಿದರು.
ದೀಪಾವಳಿ ಸಂದರ್ಭ ಮೂರು ದಿನ ಕೃಷಿ ಕಾಯಕಗಳಿಗೆ ವಿರಾಮ ಎಂಬುದು ತುಳುನಾಡಿನ ಜನರ ಅಲಿಖೀತ ನಿಯಮ ವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಲಿಪಾಡ್ಯದಂದೇ ನಡೆಯುತ್ತದೆ . ಬೆಳಗ್ಗೆ ಗೋಪೂಜೆ ನಡೆಸಿ ಸಂಜೆ ಗದ್ದೆಗಳಿಗೆ ದೀಪ ಇಟ್ಟು, ರಾತ್ರಿ ಜಾನುವಾರುಗಳಿಗೆ “ತುಡಾರ್’ (ದೀಪ) ತೋರಿಸುವ ಕ್ರಮ ಜಾನಪದೀಯವಾಗಿ ನಡೆದು ಬಂದಿದೆ.
ಗೋಪೂಜೆ ದಿನ ಬೆಳಗ್ಗೆ ಗೋವುಗಳನ್ನು ನದಿ, ಕೆರೆಗಳಿಗೆ ಕೊಂಡೊಯ್ದು ಸ್ವತ್ಛವಾಗಿ ತೊಳೆಯಲಾಗುತ್ತದೆ. ಕೋಣಗಳಿಗಾದರೆ ಮೈ ಪೂರ್ತಿ ತೆಂಗಿನ ಎಣ್ಣೆ ಹಚ್ಚಿ ಮಸಾಜ್ ಮಾಡಲಾಗುತ್ತದೆ. ಸ್ನಾನದ ಬಳಿಕ ಗೋವುಗಳಿಗೆ ಶೃಂಗಾರ ಮಾಡಲಾಗುತ್ತದೆ. ಮೈ ಮೇಲೆ ಸುಣ್ಣದ ಚಿತ್ತಾರ ಮೂಡಿಸಿ, ಚೆಂಡು ಹೂವು ಅಥವಾ ಊರಿನ ಸಾಮಾನ್ಯ ಹೂವಿನ ಮಾಲೆ ತಯಾರಿಸಿ ಅವುಗಳನ್ನು ಗೋವಿನ ಕೊರಳಿಗೆ ಹಾಕಲಾಗುತ್ತದೆ. ಸಂಜೆಯ ವೇಳೆ ಗದ್ದೆಗಳಿಗೆ ದೀಪ ಇರಿಸಿದ ಬಳಿಕ ತುಡಾರ್ ತೋರಿಸಿ ತಲೆಗೆ ತೆಂಗಿನ ಎಣ್ಣೆ ಹಾಕಿ ಕುಂಕುಮ ಹಚ್ಚಿ ಕೃತಜ್ಞತಾ ಪೂರ್ವಕವಾಗಿ ಪ್ರಾರ್ಥಿಸಲಾಗುತ್ತದೆ .
ಇದಾದ ಬಳಿಕ ರಾತ್ರಿ ಮನೆಮಂದಿಗಾಗಿ ತಯಾರಿಸುವ ಅಕ್ಕಿಯ ಸಿಹಿ ಗಟ್ಟಿಯನ್ನು ಜಾನುವಾರುಗಳಿಗೂ ನೀಡಲಾಗುತ್ತದೆ. ಮರುದಿನ ಬೆಳಗ್ಗೆ ಕೂಡ ಸಿಹಿ ನೀಡಿ ವಿಶೇಷವಾದ ಅಕ್ಕಿ ಗಂಜಿಯನ್ನು ಎಲ್ಲ ಜಾನು ವಾರುಗಳಿಗೆ ನೀಡಲಾಗುತ್ತದೆ. ಈ ಮೂಲಕ ಕರಾವಳಿಯಲ್ಲಿ ದೀಪಾವಳಿ ಸಂದರ್ಭ ಗೋಪೂಜೆ ವಿಶೇಷವಾಗಿ ಆಚರಿಸಲ್ಪಡುತ್ತದೆ.
ಗೋವರ್ಧನಗಿರಿಯ ಪೂಜೆಯ ಸಂಕೇತವಾಗಿ ಗೋಮಯವಾದ ಪುಟ್ಟಗಿರಿಯ ಆಕಾರವನ್ನು ನಿರ್ಮಿಸಿ ಪೂಜಿಸುವ ಪದ್ಧತಿಯೂ ಇದೆ.