ಕಡಬ ಪೇಟೆಯ ಸಂತೆಕಟ್ಟೆ ಜಾಗದಲ್ಲಿ ರೈತ ಉತ್ಪಾದಕ ಸಂಘದ ಹೆಸರಿನಲ್ಲಿ ಎಪಿಎಂಸಿ ವತಿಯಿಂದ ನೂತನ ಕಟ್ಟಡ ನಿರ್ಮಿಸುತ್ತಿರುವ ವಿಚಾರ ಇದೀಗ ಎಪಿಎಂಸಿ ಹಾಗೂ ಕಡಬ ಪಟ್ಟಣ ಪಂಚಾಯಿತಿ ನಡುವೆ ತೀವ್ರ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಪಟ್ಟಣ ಪಂಚಾಯಿತಿಯಿಂದ ಯಾವುದೇ ಅಧಿಕೃತ ಕಟ್ಟಡ ಪರವಾನಗಿ ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದೆ.

ಕಡಬ: ಕಡಬ ಪೇಟೆಯ ಮುಖ್ಯ ಭಾಗದಲ್ಲಿ ಸುಮಾರು 16 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಸಂತೆಕಟ್ಟೆಯ ಜಾಗವು ಇದೀಗ ನೂತನ ಕಟ್ಟಡ ನಿರ್ಮಾಣದ ವಿಚಾರವಾಗಿ ವಿವಾದದ ಕೇಂದ್ರಬಿಂದುವಾಗಿ ಪರಿಣಮಿಸಿದೆ. ಸಂತೆಕಟ್ಟೆಯನ್ನು ಎತ್ತಂಗಡಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವ ವಿಚಾರವು ಎಪಿಎಂಸಿ (APMC) ಹಾಗೂ ಕಡಬ ಪಟ್ಟಣ ಪಂಚಾಯಿತಿ ಆಡಳಿತದ ನಡುವೆ ಗುದ್ದಾಟಕ್ಕೆ ನಾಂದಿ ಹಾಡಿದೆ.
ಸಂತೆಕಟ್ಟೆ ನಿರ್ಮಾಣ ಮತ್ತು ಬಳಕೆಯಾಗದ ಕಟ್ಟಡ: ಸೀತಾರಾಮ ಗೌಡ ಪೊಸವಳಿಕೆ ಅವರು ಎಪಿಎಂಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ವಾರದ ಸಂತೆಗೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಹಲವು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸಂತೆಕಟ್ಟೆಯನ್ನು ನಿರ್ಮಿಸಿ, ಅಧಿಕೃತವಾಗಿ ಉದ್ಘಾಟನೆ ಮಾಡಲಾಗಿತ್ತು. ಆದರೆ, ಈವರೆಗೆ ವಾರದ ಸಂತೆ ಈ ನೂತನ ಕಟ್ಟೆಗೆ ಸ್ಥಳಾಂತರಗೊಳ್ಳದೆ, ಇಂದಿಗೂ ಕಡಬದ ಮುಖ್ಯ ರಸ್ತೆ ಬದಿಯಲ್ಲೇ ಭಾನುವಾರದ ಸಂತೆ ಮುಂದುವರಿದಿದೆ.
ಇದೀಗ ಈ ಸಂತೆಕಟ್ಟೆಯನ್ನು ಕೆಡವಿ, ಕೇಂದ್ರ ಕೃಷಿ ಮಂತ್ರಾಲಯದ ನಿರ್ವಹಣೆಯಡಿಯಲ್ಲಿ ಕಾರ್ಯಾಚರಿಸುತ್ತಿರುವ ರೈತ ಉತ್ಪಾದಕ ಸಂಘದ ಮುಖಾಂತರ ಎಪಿಎಂಸಿಯು ವಾಣಿಜ್ಯ ಮಳಿಗೆ/ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಪಟ್ಟಣ ಪಂಚಾಯಿತಿಯ ಅಸಮಾಧಾನಕ್ಕೆ ಕಾರಣವಾಗಿದೆ.
ಪಟ್ಟಣ ಪಂಚಾಯಿತಿ ಆಕ್ಷೇಪವೇನು? ಪರವಾನಗಿ ಕಡ್ಡಾಯ: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದು, ಸ್ಥಳೀಯ ಸಂಸ್ಥೆಯಿಂದ ಯಾವುದೇ ಕಟ್ಟಡ ಪರವಾನಗಿ ಪಡೆಯದೆ ನಿಯಮಬಾಹಿರವಾಗಿ ಈ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ
-
ಅನುಮತಿ ರಹಿತ ಕಾಮಗಾರಿ: ಸರ್ಕಾರಿ ಇಲಾಖೆಯ ಕಟ್ಟಡವಾಗಿದ್ದರೂ ಸ್ಥಳೀಯ ಸಂಸ್ಥೆಯಿಂದ ಇ-ಖಾತೆ ಮಾಡಿಸುವುದು ಮತ್ತು ನಕ್ಷೆ ಅನುಮೋದನೆ ಪಡೆದುಕೊಳ್ಳುವುದು ನಿಯಮಾನುಸಾರ ಕಡ್ಡಾಯವಾಗಿದೆ. ಅನುಮತಿ ಇಲ್ಲದೆ ನಿರ್ಮಿಸಿದರೆ ಭವಿಷ್ಯದಲ್ಲಿ ಕಟ್ಟಡಕ್ಕೆ ತೊಂದರೆಯಾಗಲಿದ್ದು, ಕಡಬ ಪಟ್ಟಣ ಪಂಚಾಯಿತಿಯಿಂದ ಪರವಾನಗಿ ಪಡೆಯದಿದ್ದರೆ ಅದನ್ನು ಅನಧಿಕೃತ ನಿರ್ಮಾಣವೆಂದು ಪರಿಗಣಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ


-
ತೆರಿಗೆ ಬಾಕಿ ನೋಟಿಸ್: ಇದೇ ವೇಳೆ ಎಪಿಎಂಸಿಗೆ ಸೇರಿದ ಮತ್ತೊಂದು ವಾಣಿಜ್ಯ ಕಟ್ಟಡಕ್ಕೆ ಸಂಬಂಧಿಸಿದಂತೆ ಅಂದಾಜು 4 ಲಕ್ಷ ರೂಪಾಯಿ ಆಸ್ತಿ ತೆರಿಗೆ ಬಾಕಿ ಇದ್ದು, ಪಾವತಿಸುವಂತೆ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಲು ಪ.ಪಂ. ನಿರ್ಧರಿಸಿದೆ.
ಎಪಿಎಂಸಿ ವಾದವೇನು? : ಎಪಿಎಂಸಿ ಇಲಾಖೆಗೆ ಸೇರಿದ ಸ್ವಂತ ಜಾಗವಾಗಿದ್ದು, ಇಲಾಖೆಯ ಹೆಸರಲ್ಲೇ ಪಹಣಿ ದಾಖಲಾಗಿದೆ. ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಿಸಲು ಸ್ಥಳೀಯ ಸಂಸ್ಥೆಗಳ ಅನುಮತಿಯ ಅಗತ್ಯವಿಲ್ಲ ಎಂಬ ನಿಯಮವಿದೆ. ಹೀಗಾಗಿ ಇಲಾಖಾ ನಿಧಿಯಿಂದ ಅನುಮೋದಿತವಾಗಿ ಕಟ್ಟಡ ಕಾಮಗಾರಿ ನಡೆಯುತ್ತಿದೆ” ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದೆ
ಡಿಸಿಗೆ ದೂರು: ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಜಿ ಕೆ.ಎಂ. ಹನೀಫ್ ಕಡಬ ಅವರು ಈ ವಿಚಾರಕ್ಕೆ ಸಂಬಂಧಿಸಿ ಈ ಜಾಗವು ಕಡಬ ಪಟ್ಟಣ ಪಂಚಾಯಿತಿಗೆ ಸೇರಿದ ಸ್ವತ್ತು. ಇದನ್ನು ರೈತ ಸಂಘ ಕಟ್ಟಡಕ್ಕಾಗಿಯೇ ಆದೇಶ ನೀಡಿ ಉಳಿಸಿಕೊಡಬೇಕಾಗಿದೆ. ಕಡಬ ತಾಲೂಕು ವ್ಯಾಪ್ತಿಯಲ್ಲಿ ರೈತರಿಗೆ ಸಂತೆಕಟ್ಟೆಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಬಿಡುವುದಿಲ್ಲ. ರೈತರ ಹಿತದೃಷ್ಟಿಯನ್ನು ಕಡೆಗಣಿಸಿ ಎಪಿಎಂಸಿ ಯಾರದೋ ಸ್ವಾರ್ಥಕ್ಕಾಗಿ ಕಟ್ಟಡವನ್ನು ವಾಣಿಜ್ಯೀಕರಣಗೊಳಿಸಲು ಹೊರಟಿರುವುದು ಸರಿಯಲ್ಲ. ಈ ಬಗ್ಗೆ ಪಟ್ಟಣ ಪಂಚಾಯಿತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು” ಎಂದು ಎಚ್ಚರಿಸಿದ್ದಾರೆ.
ಮಾಹಿತಿಯ ಪ್ರಕಾರ ಈ ಕಟ್ಟಡಕ್ಕೆ ಸಂಬಧಿಸಿದವರು ಪ.ಪಂ ಅಧಿಕಾರಿಗಳನ್ನು ಭೇಟಿ ಮಾಡಿದ್ದು ತೆರಿಗೆ ಮೊತ್ತ ಪಾವತಿಸಲು ವಾರದ ಗಡುವು ಕೇಳಿರುವುದಾಗಿ ತಿಳಿದು ಬಂದಿದೆ.
