
ಕಡಬ ತಾಲೂಕಿನ ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಯ ಐತ್ತೂರು–ನೆಕ್ಕಿಲಾಡಿ ಗಡಿಯ ಮಾಯಿಪಾಜೆಯಲ್ಲಿ ಕಾಡುಪ್ರಾಣಿಗೆ ಶೂಟೌಟ್ ನಡೆಸಿ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಸ್ಥಳ ಪರಿಶೀಲನೆ ನಡೆಸಿದೆಯಾದರೂ ಇದುವರೆಗೆ ಆರೋಪಿಗಳನ್ನು ಪತ್ತೆಹಚ್ಚಿಲ್ಲ. ಮತ್ತೊಂದೆಡೆ, ಈ ಕುರಿತು ವರದಿ ಪ್ರಕಟಿಸಿದ್ದಕ್ಕೆ ಮಾಧ್ಯಮಕ್ಕೆ ಮಾಹಿತಿ ನೀಡಿದವರ ಬೆನ್ನುಬಿದ್ದಿರುವ ಇಲಾಖೆ, ಕೆಲ ಪ್ರಭಾವಿಗಳ ಮೂಲಕ ಸುದ್ದಿಯನ್ನು ಡಿಲೀಟ್ ಮಾಡುವಂತೆ ಒತ್ತಡ ಹೇರುತ್ತಿರುವುದು ಸಾರ್ವಜನಿಕರಲ್ಲಿ ಭಾರೀ ಸಂಶಯ ಹುಟ್ಟುಹಾಕಿದೆ.


ಕಡಬ: ಹಿಂದೆ ಬೃಹತ್ ಕಾಡುಕೋಣವನ್ನು ಬರ್ಬರವಾಗಿ ಬೇಟೆಯಾಡಿ ಸಾಗಿಸಿದ ಘಟನೆಯಿಂದ ರಾಜ್ಯಮಟ್ಟದಲ್ಲಿ ಸದ್ದು ಮಾಡಿದ್ದ ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಐತ್ತೂರಿನಲ್ಲಿ, ಮತ್ತೆ ಬೇಟೆಗಾರರು ಬಂದೂಕು ಬಳಸಿ ಕಾಡುಪ್ರಾಣಿಗೆ ಶೂಟೌಟ್ ನಡೆಸಿರುವ ಗಂಭೀರ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಕಾರ್ಯವೈಖರಿ ತೀವ್ರ ಅನುಮಾನಗಳಿಗೆ ಕಾರಣವಾಗಿದೆ.
ಐತ್ತೂರು–ನೆಕ್ಕಿಲಾಡಿ ಗಡಿ ಭಾಗದ ಮಾಯಿಪಾಜೆ ರಬ್ಬರ್ ತೋಟದಲ್ಲಿ ಕಾಡುಹಂದಿ ಅಥವಾ ಜಿಂಕೆಗೆ ಶೂಟೌಟ್ ನಡೆಸಿ ಹೊತ್ತೊಯ್ದಿರುವ ಬಗ್ಗೆ ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅರಣ್ಯಾಧಿಕಾರಿಗಳ ತಂಡವು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಆದರೆ, ದಿನಗಳು ಉರುಳುತ್ತಿದ್ದರೂ ಅಕ್ರಮ ಬೇಟೆಗಾರರ ಹೆಡೆಮುರಿ ಕಟ್ಟುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ.
ಪರಿಶೀಲನೆ ನಡೆಸಿದ ಆರ್ಎಫ್ಒ – ಕುರುಹುಗಳೇ ಸಿಗಲಿಲ್ಲವೇ?
ಪ್ರಾಣಿ ಗುಂಡೇಟು ತಿಂದ ಬಳಿಕ ಜೀವಭಯದಿಂದ ಒದ್ದಾಡಿದ ಗುರುತುಗಳು, ನೆಲದ ಮೇಲೆ ಬಿದ್ದ ರಕ್ತದ ಕಲೆಗಳು ಹಾಗೂ ಬಂದೂಕಿನ ಮದ್ದು-ಕವರ್ಗಳು ಸ್ಥಳದಲ್ಲೇ ಇದ್ದರೂ, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ (RFO) ಚೇತನ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, “ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಲಾಗಿದೆ, ಆದರೆ ಬೇಟೆಗಾರರ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ತಾಂತ್ರಿಕ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ಪೊಲೀಸರ ಸಹಕಾರ ಪಡೆಯುವ ಬಗ್ಗೆ ಮೇಲಾಧಿಕಾರಿಗಳ ಜೊತೆ ಚರ್ಚಿಸಲಾಗುವುದು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸ್ಥಳೀಯವಾಗಿ ಲಭ್ಯವಾದ ಮಾಹಿತಿಯ ಪ್ರಕಾರ, ಸ್ಥಳೀಯ ಬೇಟೆಗಾರರ ತಂಡವೇ ಈ ಕೃತ್ಯವೆಸಗಿದೆ ಎಂದು ಹೇಳಲಾಗುತ್ತಿದೆ. “ಈ ಪ್ರಕರಣವೇನಾದರೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ವ್ಯಾಪ್ತಿಗೆ ಬರುತ್ತಿದ್ದರೆ, ಎಸ್ಪಿ ಡಾ. ಅರುಣ್ ಕುಮಾರ್ ನೇತೃತ್ವದ ಖಡಕ್ ಪೊಲೀಸ್ ತಂಡ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬೇಟೆಗಾರರನ್ನು ಬಂದೂಕು ಸಮೇತ ಹೆಡೆಮುರಿ ಕಟ್ಟಿ ಜೈಲಿಗಟ್ಟುತ್ತಿತ್ತು. ಅರಣ್ಯ ಇಲಾಖೆಯು ತಾಂತ್ರಿಕ ತನಿಖೆಗಾಗಿ ಕಡಬ ಪೊಲೀಸರ ಸಹಕಾರ ಕೋರಿದರೆ ಆರೋಪಿಗಳು ಶೀಘ್ರವೇ ಬಲೆಗೆ ಬೀಳುವುದು ಖಚಿತ” ಎಂದು ಸ್ಥಳೀಯರು ಒಕ್ಕೊರಲಿನಿಂದ ಮಾತನಾಡಿಕೊಳ್ಳುತ್ತಿದ್ದಾರೆ.


ಸುದ್ದಿ ಡಿಲೀಟ್ ಮಾಡಲು ಒತ್ತಡ– ಬೆನ್ನಿಗಿದ್ದಾರೆಯೇ ಪ್ರಭಾವಿಗಳು?
ಈ ಅಕ್ರಮ ಬೇಟೆಯ ಕುರಿತು ‘ಕಡಬ ಟೈಮ್ಸ್’ ಸತ್ಯಾಸತ್ಯತೆಯನ್ನು ವರದಿ ಮಾಡಿದ ಬೆನ್ನಲ್ಲೇ, ಅರಣ್ಯ ಇಲಾಖೆಯ ಕೆಲವರು ಬೇಟೆಗಾರರನ್ನು ಹುಡುಕುವ ಬದಲು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಾರ್ವಜನಿಕರ ಪತ್ತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಪ್ರಕಟವಾದ ಸುದ್ದಿಯನ್ನು ತಕ್ಷಣವೇ ಡಿಲೀಟ್ (Delete) ಮಾಡುವಂತೆ ಕೆಲ ಪ್ರಭಾವಿ ವ್ಯಕ್ತಿಗಳ ಮೂಲಕ ಪ ಮೇಲೆ ತೀವ್ರ ಒತ್ತಡ ತರಲಾಗುತ್ತಿದೆ
ಅಕ್ರಮ ಬೇಟೆಗಾರರನ್ನು ರಕ್ಷಿಸಲು ಇಷ್ಟೊಂದು ಅವಸರ ಮತ್ತು ಒತ್ತಡ ಏಕೆ? ಈ ಬೇಟೆಗಾರರ ಹಿಂದೆ ಇಲಾಖೆಯ ಭ್ರಷ್ಟ ಸಿಬ್ಬಂದಿ ಹಾಗೂ ಸ್ಥಳೀಯ ಪ್ರಭಾವಿ ರಾಜಕೀಯ ಶಕ್ತಿಗಳು ಕೈಜೋಡಿಸಿವೆಯೇ ಎಂಬ ಸಂಶಯ ಈಗ ಗಾಢವಾಗಿದೆ.
ಮತ್ತೆ ಮರುಕಳಿಸಿದ ಕಾಡುಕೋಣ ಬೇಟೆಯ ನೆರಳು: ಇದೇ ಐತ್ತೂರು ಅರಣ್ಯ ವ್ಯಾಪ್ತಿಯಲ್ಲಿ ಹಿಂದೆ ನಡೆದ ಕಾಡುಕೋಣ ಹತ್ಯೆ ಪ್ರಕರಣ ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸಿತ್ತು. ಅಂದು ಉನ್ನತ ತನಿಖೆಯ ನಾಟಕವಾಡಿದ ಅರಣ್ಯ ಇಲಾಖೆ, ಇಂದಿಗೂ ಪಶ್ಚಿಮ ಘಟ್ಟದ ಸೂಕ್ಷ್ಮ ವಲಯಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಿಲ್ಲ. ಪರಿಣಾಮವಾಗಿ ರಾತ್ರಿಯಾಗುತ್ತಿದ್ದಂತೆ ಬಂದೂಕು ಹಿಡಿದು ತಿರುಗಾಡುವ ಸಮಾಜಘಾತುಕ ಬೇಟೆಗಾರರ ಹಾವಳಿ ಮುಂದುವರಿದಿದೆ.
ಇನ್ನಾದರೂ ಹಿರಿಯ ಅರಣ್ಯಾಧಿಕಾರಿಗಳು ಸ್ಥಳೀಯ ಸಿಬ್ಬಂದಿಯನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಿ, ಪೊಲೀಸ್ ಇಲಾಖೆಯ ನೆರವಿನೊಂದಿಗೆ ಬೇಟೆಗಾರರ ಗ್ಯಾಂಗ್ ಅನ್ನು ಮಟ್ಟಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
