
ಕಡಬ: ಸುಬ್ರಹ್ಮಣ್ಯ ಹಾಗೂ ಪಂಜ ಅರಣ್ಯ ವಲಯಗಳ ಗಡಿ ಭಾಗದಲ್ಲಿರುವ ಐತ್ತೂರು–ನೆಕ್ಕಿಲಾಡಿ ಗಡಿಯ ಮಾಯಿಪಾಜೆ ರಬ್ಬರ್ ತೋಟದಲ್ಲಿ ನಡೆದಿದೆ ಎನ್ನಲಾದ ಶಂಕಿತ ವನ್ಯಜೀವಿ ಬೇಟೆ (ಶೂಟೌಟ್) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ.


ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (PCCF – ಬೆಂಗಳೂರು), ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ದಕ್ಷಿಣ ಕನ್ನಡ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಇ ಮೇಲ್ ದೂರು ಸಲ್ಲಿಸಿದ್ದಾರೆ.
ಘಟನೆಯ ವಿವರ: ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ, ಅಕ್ಟೋಬರ್ 14ರಂದು ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಮಾಯಿಪಾಜೆ ಪ್ರದೇಶದ ರಬ್ಬರ್ ತೋಟದಲ್ಲಿ ಸತತ ಮೂರು ಬಾರಿ ಬಂದೂಕಿನ ಗುಂಡಿನ ಸದ್ದು ಕೇಳಿಬಂದಿದೆ. ನಂತರ ಸ್ಥಳೀಯವಾಗಿ ಪರಿಶೀಲನೆ ನಡೆಸಿದಾಗ ರಕ್ತದ ಕಲೆಗಳು, ಕಾಡುಪ್ರಾಣಿ ಗಾಯಗೊಂಡು ಹೊರಳಾಡಿದ ಗುರುತುಗಳು ಹಾಗೂ ಮದ್ದಿನ ಕವರ್ನಂತಹ ವಸ್ತುಗಳು ಪತ್ತೆಯಾಗಿವೆ. ಈ ಪ್ರದೇಶದಲ್ಲಿ ಕಾಡುಹಂದಿ ಅಥವಾ ಚುಕ್ಕೆ ಜಿಂಕೆಯನ್ನು ಗುರಿಯಾಗಿಸಿಕೊಂಡು ಬೇಟೆಯಾಡಿರುವ ಬಲವಾದ ಸಂಶಯ ವ್ಯಕ್ತವಾಗಿದ್ದು, ವೈಜ್ಞಾನಿಕ ತನಿಖೆಯ ಮೂಲಕವೇ ಸತ್ಯಾಂಶ ಹೊರಬರಬೇಕಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಹಿಂದೆ ಇದೇ ಐತ್ತೂರು ಅರಣ್ಯ ವ್ಯಾಪ್ತಿಯಲ್ಲಿ ಬೃಹತ್ ಕಾಡುಕೋಣವನ್ನು ಬೇಟೆಯಾಡಿದ ಪ್ರಕರಣ ಭಾರೀ ಸದ್ದು ಮಾಡಿತ್ತು.ಆ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಬಂದೂಕು ವಶಪಡಿಸಿಕೊಂಡಿಲ್ಲ. ಇದೀಗ ಮತ್ತೆ ಅರಣ್ಯ ಗಡಿ ಭಾಗಗಳಲ್ಲಿ ಬಂದೂಕು ಸದ್ದು ಮಾಡಿರುವುದು ಸ್ಥಳೀಯ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಎಂದು ದೂರಿನಲ್ಲಿ ಗಮನ ಸೆಳೆಯಲಾಗಿದೆ.
ದೂರಿನಲ್ಲಿರುವ ಪ್ರಮುಖ ಬೇಡಿಕೆಗಳು:
-
ಹಿರಿಯ ಅರಣ್ಯಾಧಿಕಾರಿಗಳ ತಂಡ ಸ್ಥಳ ಮಹಜರು ನಡೆಸಿ, ರಕ್ತದ ಮಾದರಿಗಳು ಮತ್ತು ಗುಂಡಿನ ಕವರ್ಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಬೇಕು.
-
ಘಟನಾ ಸ್ಥಳದ ಸುತ್ತಮುತ್ತ ಪ್ರಾಣಿಯನ್ನು ಸಾಗಿಸಿರುವ ಜಾಡು ಹಾಗೂ ಇತರ ಭೌತಿಕ ಕುರುಹುಗಳನ್ನು ತಪಾಸಣೆ ನಡೆಸಬೇಕು.


-
ಘಟನೆ ನಡೆದ ದಿನದ ಅರಣ್ಯ ಗಸ್ತು ದಾಖಲೆಗಳು, ಬೀಟ್ ಪುಸ್ತಕಗಳು ಹಾಗೂ ಸಿಬ್ಬಂದಿಯ ಕರ್ತವ್ಯದ ವಿವರಗಳನ್ನು ಪರಿಶೀಲಿಸಬೇಕು.
-
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬೇಟೆಗಾರರ ಜಾಲ ಹಾಗೂ ವನ್ಯಜೀವಿ ಮಾಂಸ ಮಾರಾಟದ ಸಾಧ್ಯತೆಗಳನ್ನು ಪತ್ತೆಹಚ್ಚಬೇಕು.
-
ಯಾವುದೇ ಹಂತದಲ್ಲಿ ಇಲಾಖಾ ಸಿಬ್ಬಂದಿಯ ಕರ್ತವ್ಯಲೋಪ ಅಥವಾ ಶಾಮೀಲಾತಿ ಕಂಡುಬಂದಲ್ಲಿ ಅವರ ವಿರುದ್ಧವೂ ನಿಷ್ಪಕ್ಷಪಾತ ಕ್ರಮ ಕೈಗೊಳ್ಳಬೇಕು.
-
ಸುಬ್ರಹ್ಮಣ್ಯ, ಪಂಜ, ಐತ್ತೂರು, ನೆಕ್ಕಿಲಾಡಿ ಹಾಗೂ ಬಿಳಿನೆಲೆ ಗಡಿ ಭಾಗಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಿ ಅರಣ್ಯ ಸಂಪತ್ತನ್ನು ರಕ್ಷಿಸಬೇಕು.
ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವಲಯದಲ್ಲಿ ವನ್ಯಜೀವಿಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದು, ಈ ದೂರಿಗೆ ಸಂಬಂಧಿಸಿದಂತೆ ಇಲಾಖೆಯು ತ್ವರಿತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅರ್ಜಿದಾರರು ಕೋರಿದ್ದಾರೆ.
