
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ಘಟಕದಲ್ಲಿ ಕಳೆದ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ಅನಿಲ ಸ್ಫೋಟದ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗುತ್ತಿಗೆ ನೌಕರ ರಾಜೇಶ್ ಬ್ಯಾಪ್ಟಿಸ್ಟ್ (38) ಅವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ಮೃತರನ್ನು ಸುರತ್ಕಲ್ ಸಮೀಪದ ಇಡ್ಯಾ ಗ್ರಾಮದ ಕಾನ ನಿವಾಸಿ ರಾಜೇಶ್ ಬ್ಯಾಪ್ಟಿಸ್ಟ್ (ರಾಜೇಶ್ ಡಿ’ಸಿಲ್ವ) ಎಂದು ಗುರುತಿಸಲಾಗಿದೆ. ಇವರು ಕಳೆದ ಹಲವು ವರ್ಷಗಳಿಂದ ಎಂಆರ್ಪಿಎಲ್ನಲ್ಲಿ ಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವಿವಾಹಿತರಾಗಿದ್ದರು.
18 ದಿನಗಳ ಜೀವನ್ಮರಣ ಹೋರಾಟ ಅಂತ್ಯ: ಸೆಪ್ಟೆಂಬರ್ 30ರಂದು ಕರ್ತವ್ಯದಲ್ಲಿದ್ದ ವೇಳೆ ಘಟಕದಲ್ಲಿ ಹಠಾತ್ತನೆ ಭೀಕರ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಕರ್ತವ್ಯನಿರತರಾಗಿದ್ದ ರಾಜೇಶ್ ಅವರು ಸುಮಾರು ಶೇ. 35 ರಷ್ಟು ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದರು. ತಕ್ಷಣವೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕಳೆದ 18 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅವರು ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.


ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದ ಮನೀಶ್ ಕರ್ಕೇರ: ಸ್ಫೋಟ ಸಂಭವಿಸಿದ ದಿನದಂದೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗುತ್ತಿಗೆ ನೌಕರ, ಬೈಕಂಪಾಡಿ ನಿವಾಸಿ ಮನೀಶ್ ಕರ್ಕೇರ ಎಂಬ ಯುವಕ ಸ್ಥಳದಲ್ಲೇ ಸಜೀವ ದಹನಗೊಂಡು ದುರಂತ ಸಾವಿಗೀಡಾಗಿದ್ದರು. ಇದೀಗ ಗಾಯಾಳು ರಾಜೇಶ್ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದು ಕುಟುಂಬಸ್ಥರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
ಕೈಗಾರಿಕಾ ಸುರಕ್ಷತಾ ಲೋಪವೇ ಈ ಅವಘಡಕ್ಕೆ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದು, ಸೂಕ್ತ ಪರಿಹಾರ ಹಾಗೂ ಸುರಕ್ಷತಾ ಕ್ರಮಗಳ ಜಾರಿಗೆ ಕಾರ್ಮಿಕ ವಲಯದಿಂದ ಒತ್ತಾಯಗಳು ಕೇಳಿಬಂದಿವೆ.
