
ಬೆಳ್ತಂಗಡಿ ತಾಲೂಕಿನ ನಾವೂರು ಪೇಟೆಯಲ್ಲಿರುವ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣವನ್ನು ಭೇದಿಸಿರುವ ಬೆಳ್ತಂಗಡಿ ಪೊಲೀಸರು, ಪ್ರಮುಖ ಆರೋಪಿ ನಾವೂರು ನಿವಾಸಿ ರವಿ ಪೂಜಾರಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಶಂಕೆಯ ಮೇಲೆ ಸುರೇಶ್ ಇಂಚರ ಹಾಗೂ ದಿನೇಶ್ ಪ್ರಭು ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.


ಬೆಳ್ತಂಗಡಿ: ನಾವೂರು ಪೇಟೆಯ ಸ್ವಾತಿ ಕಟ್ಟಡದಲ್ಲಿ ಡಾ. ಪ್ರದೀಪ್ ಅವರು ನಡೆಸುತ್ತಿದ್ದ ಆರೋಗ್ಯ ಕ್ಲಿನಿಕ್ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ದ್ವೇಷ ತೀರಿಸಿಕೊಂಡಿದ್ದ ದುಷ್ಕೃತ್ಯ ಪ್ರಕರಣವನ್ನು ಬೆಳ್ತಂಗಡಿ ಠಾಣಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ, ನಾವೂರು ಗ್ರಾಮದ ನಿವಾಸಿ ರವಿ ಪೂಜಾರಿ ಎಂಬಾತನನ್ನು ಬಂಧಿಸಲಾಗಿದೆ.
ಜೊತೆಗೆ ಘಟನೆಯಲ್ಲಿ ಭಾಗಿಯಾದ ಶಂಕೆ ಹಿನ್ನೆಲೆಯಲ್ಲಿ ನಾವೂರು ನಿವಾಸಿ ಸುರೇಶ್ ಇಂಚರ ಹಾಗೂ ಪುತ್ತೂರಿನ ಕೌಡಿಚಾರು ಬಳಿ ನಾವೂರು ನಿವಾಸಿ ದಿನೇಶ್ ಪ್ರಭು ಎಂಬಿಬ್ಬರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಲಕ್ಷಾಂತರ ರೂಪಾಯಿ ಮೌಲ್ಯದ ಔಷಧ, ಸಲಕರಣೆ ಭಸ್ಮ: ಅಕ್ಟೋಬರ್ 6ರಂದು ತಡರಾತ್ರಿ ಕ್ಲಿನಿಕ್ ಮುಚ್ಚಿದ್ದ ವೇಳೆ ಬಂದ ಕಿಡಿಗೇಡಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರು. ಇದರ ಪರಿಣಾಮವಾಗಿ ಕ್ಲಿನಿಕ್ನಲ್ಲಿದ್ದ ಜೀವ ರಕ್ಷಕ ಔಷಧಿಗಳು, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸುಮಾರು 2 ರಿಂದ 3 ಲಕ್ಷ ರೂಪಾಯಿ ನಷ್ಟ ಸಂಭವಿಸಿತ್ತು. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ BNS ಕಲಂ 326, 324 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.


ಸಾರ್ವಜನಿಕ ಆಕ್ರೋಶ : ನಾವೂರು ಗ್ರಾಮದಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಾ, ಗ್ರಾಮದಲ್ಲಿ ಶಾಂತಿ–ಸಾಮರಸ್ಯ ಕಾಪಾಡುವಲ್ಲಿ ಮುಂಚೂಣಿಯಲ್ಲಿದ್ದ ಡಾ. ಪ್ರದೀಪ್ ಅವರ ಕ್ಲಿನಿಕ್ ಮೇಲಿನ ದಾಳಿಯನ್ನು ಶಾಸಕ ಹರೀಶ್ ಪೂಂಜ, ಸ್ಥಳೀಯ ಜನಪ್ರತಿನಿಧಿಗಳು, ವೈದ್ಯಕೀಯ ಸಂಘಟನೆಗಳು ಹಾಗೂ ನಾವೂರು ಗ್ರಾಮಸ್ಥರು ಖಂಡನಾ ಸಭೆ ನಡೆಸಿ ತೀವ್ರವಾಗಿ ಖಂಡಿಸಿದ್ದರು.
ಪೊಲೀಸ್ ತಂಡದ ಕ್ಷಿಪ್ರ ಕಾರ್ಯಾಚರಣೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನ, ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಬೂಮರೆಡ್ಡಿ ಹಾಗೂ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಪಿಎಸ್ಐಗಳಾದ ಆನಂದ್ ಮತ್ತು ಸಿಕಂದರ್ ಪಾಷಾ ಅವರ ತಂಡ ಜಾಲ ಬೀಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದೆ. ಸ್ಥಳಕ್ಕೆ ಸೋಕೋ (SOCO) ವಿಧಿವಿಜ್ಞಾನ ತಜ್ಞರ ತಂಡವೂ ಭೇಟಿ ನೀಡಿ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿತ್ತು. ಘಟನೆ ನಡೆದು ಕೆಲವೇ ದಿನಗಳಲ್ಲಿ ಆರೋಪಿಯನ್ನು ಬಂಧಿಸುವ ಮೂಲಕ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
