
ಹಿಂದೆ ಬೃಹತ್ ಕಾಡುಕೋಣವನ್ನು ಬೇಟೆಯಾಡಿ ಕೊಂದ ಪ್ರಕರಣದಿಂದ ರಾಜ್ಯಮಟ್ಟದಲ್ಲಿ ಸದ್ದು ಮಾಡಿದ್ದ ಕಡಬ ತಾಲೂಕಿನ ಐತ್ತೂರಿನಲ್ಲಿ ಮತ್ತೊಮ್ಮೆ ಬೇಟೆಗಾರರ ಗ್ಯಾಂಗ್ ಪ್ರತ್ಯಕ್ಷವಾಗಿದೆ. ಸುಬ್ರಹ್ಮಣ್ಯ ಮತ್ತು ಪಂಜ ಅರಣ್ಯ ವಲಯದ ಗಡಿಭಾಗವಾದ ಮಾಯಿಪಾಜೆಯ ರಬ್ಬರ್ ತೋಟದಲ್ಲಿ ಕಾಡುಪ್ರಾಣಿಯೊಂದರ ಮೇಲೆ ಮೂರು ಬಾರಿ ಗುಂಡು ಹಾರಿಸಿ ಬೇಟೆಯಾಡಲಾಗಿದ್ದು, ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಶಾಮೀಲಾತಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.


ಕಡಬ: ಹಿಂದೆ ಬೃಹತ್ ಕಾಡುಕೋಣವನ್ನು ಬರ್ಬರವಾಗಿ ಬೇಟೆಯಾಡಿ ಸಾಗಿಸಿದ ಘಟನೆಯಿಂದ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಐತ್ತೂರು ಭಾಗದಲ್ಲಿ ಅಕ್ರಮ ಬೇಟೆಗಾರರ ಜಾಲ ಮತ್ತೆ ಸಕ್ರಿಯವಾಗಿದೆ.
ಸುಬ್ರಹ್ಮಣ್ಯ ಹಾಗೂ ಪಂಜ ವಲಯ ಅರಣ್ಯದ ಗಡಿ ಭಾಗವಾಗಿರುವ ಐತ್ತೂರು–ನೆಕ್ಕಿಲಾಡಿ ಗಡಿಯ ಮಾಯಿಪಾಜೆ ಎಂಬಲ್ಲಿನ ರಬ್ಬರ್ ತೋಟದಲ್ಲಿ ಮುಂಜಾನೆಯ ವೇಳೆ ಕಾಡುಪ್ರಾಣಿಯೊಂದಕ್ಕೆ ಶೂಟೌಟ್ ನಡೆಸಿ ಬೇಟೆಯಾಡಿರುವ ಘಟನೆ ಸೆಪ್ಟಂಬರ್ 14 ರ ಮುಂಜಾನೆ ಬೆಳಕಿಗೆ ಬಂದಿದೆ.
ಮುಂಜಾನೆ 3 ಗಂಟೆಗೆ ಕೇಳಿಸಿದ ಗುಂಡಿನ ಮೊರೆತ: ಲಭ್ಯವಾಗಿರುವ ಖಚಿತ ಮಾಹಿತಿಯ ಪ್ರಕಾರ, ಮುಂಜಾನೆ ಸುಮಾರು 3:00 ಗಂಟೆಯ ಸುಮಾರಿಗೆ ಮಾಯಿಪಾಜೆಯ ರಬ್ಬರ್ ತೋಟದಲ್ಲಿ ಸತತ ಮೂರು ಬಾರಿ ಬಂದೂಕಿನ ಗುಂಡಿನ ಸದ್ದು (ಶೂಟೌಟ್) ಕೇಳಿಬಂದಿದೆ.
ಸ್ಥಳೀಯರು ಸ್ಥಳ ಪರಿಶೀಲನೆ ನಡೆಸಿದಾಗ, ಕಾಡುಪ್ರಾಣಿಯೊಂದು ಗುಂಡೇಟು ತಿಂದ ಬಳಿಕ ಜೀವಭಯದಿಂದ ಹೊರಳಾಡಿದ ಗುರುತುಗಳು, ರಕ್ತದ ಕಲೆಗಳು ಹಾಗೂ ಬಂದೂಕಿನ ಮದ್ದು ಮತ್ತು ಕವರ್ಗಳು ಪತ್ತೆಯಾಗಿವೆ. ಬೇಟೆಗಾರರ ತಂಡವು ಕಾಡುಹಂದಿ ಅಥವಾ ಜಿಂಕೆಯನ್ನು ಗುರಿಯಾಗಿಸಿಕೊಂಡು ಶೂಟೌಟ್ ನಡೆಸಿ, ಬಳಿಕ ಅದನ್ನು ಹೊತ್ತೊಯ್ದಿರಬಹುದೆಂದು ಶಂಕಿಸಲಾಗಿದೆ.


ಕಾಡುಕೋಣ ಹತ್ಯೆಯ ಕರಾಳ ನೆನಪು ಮರುಕಳಿಸಿತೇ?: ಇದೇ ಐತ್ತೂರು ಅರಣ್ಯ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಬೃಹತ್ ಗಾತ್ರದ ಕಾಡುಕೋಣದ ಹತ್ಯೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಆಗ ಉನ್ನತ ಮಟ್ಟದ ತನಿಖೆ, ಕಠಿಣ ಕ್ರಮದ ಭರವಸೆಗಳು ಕೇಳಿಬಂದಿದ್ದರೂ, ವಾಸ್ತವದಲ್ಲಿ ಅರಣ್ಯ ಪ್ರದೇಶದಲ್ಲಿ ಬೇಟೆಗಾರರ ಹಾವಳಿಗೆ ಯಾವುದೇ ಕಡಿವಾಣ ಬಿದ್ದಿಲ್ಲ ಎಂಬುದಕ್ಕೆ ಈ ತಾಜಾ ಘಟನೆಯೇ ಜ್ವಲಂತ ಸಾಕ್ಷಿಯಾಗಿದೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಹೊಂದಿರುವ ಈ ಗಡಿ ಭಾಗಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಬಂದೂಕು ಹಿಡಿದು ತಿರುಗಾಡುವ ಜಾಲಗಳು ಮುಕ್ತವಾಗಿ ಓಡಾಡುತ್ತಿವೆ.
ಅರಣ್ಯಾಧಿಕಾರಿಗಳೇ ಶಾಮೀಲಾಗಿರುವ ಆರೋಪ: ಐತ್ತೂರು, ನೆಕ್ಕಿಲಾಡಿ, ಪಂಜ ಹಾಗೂ ಬಿಳಿನೆಲೆ ಗಡಿ ಭಾಗಗಳಲ್ಲಿ ನಿರಂತರವಾಗಿ ಕಾಡುಪ್ರಾಣಿಗಳ ಬೇಟೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಬೇಟೆಗಾರರನ್ನು ಬಂಧಿಸಲು ಮುಂದಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಗಸ್ತು ತಿರುಗಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಸ್ಥಳೀಯ ಅರಣ್ಯ ಸಿಬ್ಬಂದಿಯೇ ಈ ಅಕ್ರಮ ಬೇಟೆಗಾರರ ಜೊತೆ ಕೈಜೋಡಿಸಿರುವ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.
‘ನಮಗೆ ಮಾಹಿತಿ ಇಲ್ಲ’ ಎಂದ ಆರ್ಎಫ್ಒ: ಈ ಶೂಟೌಟ್ ಪ್ರಕರಣದ ಕುರಿತು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ (RFO) ಚೇತನ್ ಅವರನ್ನು ಸಂಪರ್ಕಿಸಿದಾಗ, “ಈ ಘಟನೆಯ ಕುರಿತು ಇಲಾಖೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಆದರೆ, ರಕ್ತದ ಕಲೆಗಳು ಮತ್ತು ಗುಂಡಿನ ಕವರ್ಗಳು ಸಾಕ್ಷಿಯಾಗಿ ಬಿದ್ದಿದ್ದರೂ ಇಲಾಖೆಗೆ ಮಾಹಿತಿ ಇಲ್ಲದಿರುವುದು ಅರಣ್ಯ ಇಲಾಖೆಯ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತಿದ್ದು, ಉನ್ನತ ಅರಣ್ಯಾಧಿಕಾರಿಗಳು ತಕ್ಷಣ ಈ ಜಾಲದ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
