ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೃಷಿ ಸಚಿವ ನರೇಂದ್ರಸ್ವಾಮಿ ಸದ್ದಿಲ್ಲದೆ ಭೇಟಿ

ರಾಜ್ಯ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಆಶ್ಲೇಷ ಬಲಿ ಹಾಗೂ ಪಂಚಾಮೃತ ಮಹಾಭಿಷೇಕ ಸೇವೆಗಳನ್ನು ನೆರವೇರಿಸಿ, ಹೊಸಳ್ಳಿಗಮ್ಮ ದೈವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಆದರೆ, ಕರಾವಳಿ ಭಾಗದಲ್ಲಿ ಅಡಿಕೆ ಹಳದಿ ರೋಗ, ಎಲೆಚುಕ್ಕಿ ರೋಗ, ಬೆಳೆ ವಿಮೆ ಹಾಗೂ ಶೂನ್ಯ ಬಡ್ಡಿ ಸಾಲದ ಗಂಭೀರ ಸಮಸ್ಯೆಗಳು ಜೀವಂತವಾಗಿರುವಾಗಲೇ ಬಂದ ಕೃಷಿ ಸಚಿವರ ಕಾರ್ಯಕ್ರಮದ ಬಗ್ಗೆ ದೇವಸ್ಥಾನದ ಆಡಳಿತವು ಸ್ಥಳೀಯ ಪತ್ರಕರ್ತರಿಗೆ ಯಾವುದೇ ಪೂರ್ವ ಮಾಹಿತಿ ನೀಡದೆ ಗೌಪ್ಯವಾಗಿಟ್ಟಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

kadaba times

ಸುಬ್ರಹ್ಮಣ್ಯ: ರಾಜ್ಯ ಕೃಷಿ ಸಚಿವರಾದ ಪಿ.ಎಂ. ನರೇಂದ್ರಸ್ವಾಮಿ ಅವರು ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಕ್ಟೋಬರ್ 23  ಶುಕ್ರವಾರ ಮುಂಜಾನೆ ದಿಢೀರ್ ಭೇಟಿ ನೀಡಿ ವಿಶೇಷ ಪೂಜೆ-ಸೇವೆಗಳನ್ನು ಸಲ್ಲಿಸಿದರು.

ಮುಂಜಾನೆಯೇ ಆಗಮಿಸಿದ ಸಚಿವರು, ಕ್ಷೇತ್ರದಲ್ಲಿ ವಿಧಿ-ವಿಧಾನಗಳೊಂದಿಗೆ ಪವಿತ್ರ ಆಶ್ಲೇಷ ಬಲಿ ಪೂಜೆಯನ್ನು ನೆರವೇರಿಸಿದರು. ತದನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸ್ವಾಮಿಗೆ ಪಂಚಾಮೃತ ಮಹಾಭಿಷೇಕ ಸೇವೆ ಸಲ್ಲಿಸಿ ಪ್ರಾರ್ಥಿಸಿದರು.

ದೇವಳದಿಂದ ಸಚಿವರಿಗೆ ಗೌರವ ಸಮರ್ಪಣೆ : ಪೂಜಾ ವಿಧಿ-ವಿಧಾನಗಳ ಬಳಿಕ ಶ್ರೀ ದೇವಳದ ಪ್ರಧಾನ ಅರ್ಚಕರಾದ ಸೀತಾರಾಮ ಎಡಪಡಿತಾಯ ಅವರು ಸಚಿವರಿಗೆ ಪ್ರಸಾದ ನೀಡಿ, ಶಾಲು ಹೊದಿಸಿ ಕ್ಷೇತ್ರದ ವತಿಯಿಂದ ಗೌರವಿಸಿದರು. ನಂತರ ಸಚಿವರು ಪರಿವಾರ ಕ್ಷೇತ್ರವಾದ ಹೊಸಳ್ಳಿಗಮ್ಮ ದೈವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿ ಕುಕ್ಕೆಯಿಂದ ನಿರ್ಗಮಿಸಿದರು.

uniq
kadaba times

ಪತ್ರಕರ್ತರಿಗೆ ಮಾಹಿತಿ ನೀಡದ ಆಡಳಿತ ಮಂಡಳಿ:  ಸಚಿವರ ಪ್ರವಾಸದ ಕುರಿತು ಕುಕ್ಕೆ ಸುಬ್ರಹ್ಮಣ್ಯದ ಸ್ಥಳೀಯ ಪತ್ರಕರ್ತರಿಗೆ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ದೇವಸ್ಥಾನದ ವತಿಯಿಂದಾಗಲಿ ಅಥವಾ ಇಲಾಖೆಯಿಂದಾಗಲಿ ಯಾವುದೇ ಅಧಿಕೃತ ಮುನ್ಸೂಚನೆ ಅಥವಾ ಮಾಹಿತಿಯನ್ನು ನೀಡಿರಲಿಲ್ಲ.

ಪ್ರಸ್ತುತ ಮಲೆನಾಡು ಹಾಗೂ ಕರಾವಳಿ ಭಾಗದ ರೈತರು ಅಡಿಕೆ ಬೆಳೆಗೆ ಬೆಂಬಿಡದೆ ಕಾಡುತ್ತಿರುವ ಎಲೆಚುಕ್ಕಿ ಮತ್ತು ಹಳದಿ ರೋಗದ ಸಂಕಷ್ಟದಲ್ಲಿದ್ದಾರೆ. ಜೊತೆಗೆ ಬೆಳೆ ವಿಮೆ ಪರಿಹಾರ ಕಡಿತ, ಸಹಕಾರಿ ಸಂಘಗಳ ಶೂನ್ಯ ಬಡ್ಡಿ ದರದ (0% Interest) ಸಾಲದ ಮಿತಿ ಏರಿಕೆಯಾಗದಿರುವುದು ಸೇರಿದಂತೆ ಬೆಳೆಗಾರರು ತೀವ್ರ ಆರ್ಥಿಕ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಇಂತಹ ಸಂಕಷ್ಟದ ಹೊತ್ತಿನಲ್ಲಿ ಇಲಾಖೆಯ ಮುಖ್ಯಸ್ಥರಾದ ಕೃಷಿ ಸಚಿವರೇ ಕ್ಷೇತ್ರಕ್ಕೆ ಬಂದಿದ್ದರೂ, ಅವರನ್ನು ಭೇಟಿಯಾಗಿ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು, ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಲು ಸ್ಥಳೀಯ ಮಾಧ್ಯಮದವರಿಗೆ ಮಾಹಿತಿಯೇ ಸಿಗಲಿಲ್ಲ. “ದೇವಸ್ಥಾನದ ಆಡಳಿತ ಮಂಡಳಿಯ ಈ  ನಡವಳಿಕೆಯಿಂದಾಗಿ ಸಚಿವರ ಮುಂದೆ ರೈತರ ಧ್ವನಿ ಎತ್ತುವ ದೊಡ್ಡ ಅವಕಾಶ ಕೈತಪ್ಪಿಹೋಯಿತು” ಎಂದು ಸ್ಥಳೀಯ ಪತ್ರಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Articles

Latest Articles