
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನೊಬ್ಬನ ಮೇಲೆ ಕಳೆದ 7 ತಿಂಗಳಿನಿಂದ ಸತತವಾಗಿ ಲೈಂಗಿಕ ದೌರ್ಜನ್ಯವೆಸಗಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕ ನೀಡಿದ ದೂರಿನ ಮೇರೆಗೆ ಒಟ್ಟು 6 ಪ್ರತ್ಯೇಕ ಪೋಕ್ಸೋ (POCSO) ಪ್ರಕರಣಗಳನ್ನು ದಾಖಲಿಸಿಕೊಂಡಿರುವ ವಿಟ್ಲ ಪೊಲೀಸರು, ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ಅಪ್ರಾಪ್ತ ಬಾಲಕನೊಬ್ಬನನ್ನು ಪುಸಲಾಯಿಸಿ ಹಾಗೂ ಬೆದರಿಸಿ ಸತತ ಏಳು ತಿಂಗಳುಗಳ ಕಾಲ ಕಾಮುಕರ ಗುಂಪೊಂದು ಲೈಂಗಿಕ ದೌರ್ಜನ್ಯವೆಸಗಿರುವ ಅತ್ಯಂತ ಹೇಯ ಹಾಗೂ ಬೆಚ್ಚಿಬೀಳಿಸುವ ಕೃತ್ಯವೊಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕ ನೀಡಿದ ಪ್ರತ್ಯೇಕ ದೂರುಗಳನ್ವಯ ವಿಟ್ಲ ಠಾಣೆಯಲ್ಲಿ ಒಟ್ಟು 6 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತರನ್ನು ಜವಾದ್, ಶಾಹಿದ್ ಹಾಗೂ ರಿಯಾಝ್ @ ಅಬ್ದುಲ್ ಗಫೂರ್ ಎಂದು ಗುರುತಿಸಲಾಗಿದೆ.
ಫೆಬ್ರವರಿಯಿಂದ ಆಗಸ್ಟ್ವರೆಗೆ ನಿರಂತರ ದೌರ್ಜನ್ಯ:


ವಿಟ್ಲ ಠಾಣಾ ವ್ಯಾಪ್ತಿಯ ಸಂತ್ರಸ್ತ ಬಾಲಕನಿಗೆ 2026 ನೇ ಸಾಲಿನ ಫೆಬ್ರವರಿ ತಿಂಗಳಿನಿಂದ ಆಗಸ್ಟ್ ತಿಂಗಳಿನ ಅವಧಿಯವರೆಗೆ ಆರೋಪಿಗಳಾದ ಜವಾದ್, ಶಾಹಿದ್, ರಿಯಾಝ್ @ ಅಬ್ದುಲ್ ಗಫೂರ್ ಹಾಗೂ ಇತರ ಮೂವರು ವ್ಯಕ್ತಿಗಳು ವಿವಿಧ ಸ್ಥಳಗಳಲ್ಲಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಬಾಲಕ ಕೊನೆಗೂ ಧೈರ್ಯ ಮಾಡಿ ಕುಟುಂಬಸ್ಥರ ಗಮನಕ್ಕೆ ತಂದಿದ್ದು, ಸೆಪ್ಟೆಂಬರ್ 04, 2026 ರಂದು ವಿಟ್ಲ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾನೆ.
ದೌರ್ಜನ್ಯದ ಪ್ರತ್ಯೇಕ ಘಟನೆಗಳು ಹಾಗೂ ಭಾಗಿಯಾದ ಆರೋಪಿಗಳ ಆಧಾರದ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಬರೋಬ್ಬರಿ 6 ಅಪರಾಧ ಪ್ರಕರಣಗಳು ದಾಖಲಾಗಿವೆ:ಅಪರಾಧ ಸಂಖ್ಯೆಗಳು: 185/2026, 186/2026, 187/2026, 188/2026, 189/2026 ಹಾಗೂ 190/2026ಕಲಂಗಳು: 4(2), 5(m), 6, 8 ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 (POCSO Act – 2012)
ಮೂವರ ಬಂಧನ: ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ವಿಟ್ಲ ಪೊಲೀಸರು, ತ್ವರಿತ ಕಾರ್ಯಾಚರಣೆ ನಡೆಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗಳಾದ ಜವಾದ್, ಶಾಹಿದ್ ಮತ್ತು ರಿಯಾಝ್ @ ಅಬ್ದುಲ್ ಗಫೂರ್ ಎಂಬ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಿ ಆದೇಶಿಸಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಉಳಿದ ಮೂವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
