
ಪೆರುವಾಜೆ ಗ್ರಾಮದ ದುರ್ಗಾನಗರದಲ್ಲಿ ದಶಕಗಳಿಂದ ನೆಲೆಸಿರುವ ಪರಿಶಿಷ್ಟ ಜಾತಿಯ 17 ಕುಟುಂಬಗಳು ತಮ್ಮ ಸ್ವಾಧೀನದಲ್ಲಿರುವ ಜಮೀನನ್ನು ಸಕ್ರಮಗೊಳಿಸಲು ಸಲ್ಲಿಸಿದ್ದ ಫಾರಂ 50, 53 ಹಾಗೂ 57ರ ಅರ್ಜಿಗಳಿಗೆ ಸುಳ್ಯ ತಹಶೀಲ್ದಾರ್ ನಾನಾ ಕಾರಣಗಳನ್ನು ನೀಡಿ ಹಿಂಬರಹ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ನಿವಾಸಿಗಳು ರಾಜ್ಯದ ಕಂದಾಯ ಸಚಿವರಿಗೆ ನೇರವಾಗಿ ದೂರು ನೀಡಲು ನಿರ್ಧರಿಸಿದ್ದಾರೆ.


ಸುಳ್ಯ / ಪೆರುವಾಜೆ: ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ದುರ್ಗಾನಗರದಲ್ಲಿ ಹಲವಾರು ವರ್ಷಗಳಿಂದ ವಾಸ್ತವ್ಯವಿದ್ದು, ಕೃಷಿ ಮಾಡಿಕೊಂಡು ಬರುತ್ತಿರುವ ಪರಿಶಿಷ್ಟ ಜಾತಿಯ (SC) ಬಡ ಕುಟುಂಬಗಳಿಗೆ ಅಕ್ರಮ-ಸಕ್ರಮ ಯೋಜನೆಯಡಿ ಭೂ ಮಂಜೂರಾತಿ ನಿರಾಕರಿಸಲಾಗಿದ್ದು, ಇದರ ವಿರುದ್ಧ ರಾಜ್ಯ ಸರ್ಕಾರದ ಕಂದಾಯ ಸಚಿವರಿಗೆ ದೂರು ಸಲ್ಲಿಸಲು ಸ್ಥಳೀಯ ಕುಟುಂಬಗಳು ತೀರ್ಮಾನಿಸಿವೆ.
ಸುಮಾರು 70ಕ್ಕೂ ಹೆಚ್ಚು ವರ್ಷಗಳಿಂದ ಈ ಜಾಗದಲ್ಲಿ ವಾಸಿಸುತ್ತಿರುವ 17 ದಲಿತ ಕುಟುಂಬಗಳು ತಮಗೆ ಭೂಮಿ ಹಕ್ಕು ದೊರೆಯಬಹುದು ಎಂಬ ಭರವಸೆಯಲ್ಲಿ ಕಳೆದ 6 ವರ್ಷಗಳಿಂದ ಕಂದಾಯ ಕಚೇರಿಗಳಿಗೆ ಸತತ ಅಲೆದಾಟ ನಡೆಸುತ್ತಿವೆ.
ಅರ್ಜಿ ತಿರಸ್ಕರಿಸಿ ತಹಶೀಲ್ದಾರ್ ಹಿಂಬರಹ: ದುರ್ಗಾನಗರ ನಿವಾಸಿಗಳು ತಮ್ಮ ಸ್ವಾಧೀನದಲ್ಲಿರುವ ಭೂಮಿಯನ್ನು ಮಂಜೂರು ಮಾಡುವಂತೆ ಕೋರಿ ಕಂದಾಯ ಕಾಯ್ದೆಯ ಫಾರಂ ನಂ. 50, 53 ಹಾಗೂ 57ರ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರು. ಸಚಿವರ ಜನತಾದರ್ಶನದಲ್ಲೂ ಅಹವಾಲು ಸಲ್ಲಿಸಲಾಗಿತ್ತು.


ಆದರೆ, ಸುಳ್ಯ ತಾಲೂಕು ತಹಶೀಲ್ದಾರ್ ಕಚೇರಿಯಿಂದ ದಿನಾಂಕ 24.08.2026 ರಂದು ಹೊರಡಿಸಲಾಗಿರುವ ಹಿಂಬರಹ ಪತ್ರದಲ್ಲಿ (ಸಂಖ್ಯೆ: ಎನ್.ಸಿ.ಆರ್.ಸಿ.ಆರ್.566,576/24-25) ಅರ್ಜಿಗಳನ್ನು ವಿಲೇ ಇಡಲಾಗಿದೆ ಎಂದು ತಿಳಿಸಲಾಗಿದೆ. ಅರ್ಜಿದಾರರ ವಶದಲ್ಲಿ ಅತಿಕ್ರಮಣ ಜಮೀನು ಇರುವುದಿಲ್ಲ ಹಾಗೂ ಸರ್ಕಾರಿ ಜಮೀನು ಲಭ್ಯವಿಲ್ಲ. ಕೆಲವರ ಜಮೀನು ಈಗಾಗಲೇ ಅವರ ತಂದೆ ಅಥವಾ ಜಂಟಿ ಹೆಸರಿನಲ್ಲಿ ಮಂಜೂರಾಗಿ ಪಹಣಿ ದಾಖಲಾಗಿದೆ. ಮತ್ತೆ ಕೆಲವರಿಗೆ ಮಂಜೂರಾದ ಜಮೀನು ಇರುವುದರಿಂದ ಹೊಸ ಮಂಜೂರಾತಿಗೆ ಅವಕಾಶವಿಲ್ಲ ಎಂದು ಕಂದಾಯ ನಿರೀಕ್ಷಕರ ವರದಿ ಆಧರಿಸಿ ಹಿಂಬರಹ ನೀಡಲಾಗಿದೆ.
ಕಂದಾಯ ಸಚಿವರಿಗೆ ದೂರು ನೀಡಲು ನಿರ್ಧಾರ: ವರ್ಷಗಳಿಂದ ಇದೇ ಜಾಗದಲ್ಲಿ ಜೋಪಡಿ ಹಾಗೂ ಕೃಷಿ ಮಾಡಿಕೊಂಡು ಬದುಕುತ್ತಿದ್ದರೂ ತಾಲೂಕು ಆಡಳಿತ ಸೂಕ್ತ ಪರಿಶೀಲನೆ ನಡೆಸದೆ ಹಾರಿಕೆಯ ಉತ್ತರ ನೀಡಿ ಅನ್ಯಾಯ ಮಾಡಿದೆ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ್ ಅವರ ಈ ನಕಾರಾತ್ಮಕ ಹಿಂಬರಹದ ವಿರುದ್ಧ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ನೇರವಾಗಿ ದೂರು ನೀಡಿ, ಸ್ಥಳ ಪರಿಶೀಲನೆ ನಡೆಸಿ ನ್ಯಾಯ ಒದಗಿಸುವಂತೆ ಮನವಿ ಮಾಡಲು ನಿರ್ಧರಿಸಿದ್ದೇವೆ ಎಂದು ದುರ್ಗಾನಗರದ ನಿವಾಸಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
