ಕಡಬ ಸಮುದಾಯ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡದೆ ಔಷಧಿ ನೀಡಿದ ಕಲಿಕಾ ವೈದ್ಯರು!

kadaba times

ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಕಲಿಕಾ ವೈದ್ಯರು ರೋಗಿಗಳಿಗೆ ಸರಿಯಾದ ತಪಾಸಣೆ ನಡೆಸದೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  ಕೋಡಿಂಬಾಳದ ವ್ಯಕ್ತಿಯೊಬ್ಬರು  ಜ್ವರ ಹಾಗೂ ಬಳಲಿಕೆಯಿಂದ ಚಿಕಿತ್ಸೆಗೆ ತೆರಳಿದ್ದಾಗ ಯಾವುದೇ ಮೂಲಭೂತ ಪರೀಕ್ಷೆ ನಡೆಸದೆ ಔಷಧಿ ನೀಡಲಾಗಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದ ಬಳಿಕ ಎಕ್ಸ್-ರೇ ಹಾಗೂ ರಕ್ತ ಪರೀಕ್ಷೆ ನಡೆಸಿ ಎದೆಯ ಸೋಂಕು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.

kadaba times
uniq

ಕಡಬ:ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಸೂಕ್ತ ವೈದ್ಯಕೀಯ ಸೇವೆ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ರೋಗಿಗಳಿಗೆ ಅಗತ್ಯ ಮೂಲಭೂತ ಪರೀಕ್ಷೆಗಳನ್ನು ನಡೆಸದೆಯೇ ಔಷಧಿ ಚೀಟಿ ಬರೆದುಕೊಡುತ್ತಿರುವ ಗಂಭೀರ ವಿಚಾರವೊಂದು ಬೆಳಕಿಗೆ ಬಂದಿದೆ.

ಆಗಸ್ಟ್ 4ರಂದು ನಡೆದ ಕಡಬ ತಾಲೂಕು ಮಟ್ಟದ SC-ST ಕುಂದು ಕೊರತೆ ಸಭೆಯಲ್ಲಿಯೂ ಆಸ್ಪತ್ರೆಯ ಕಲಿಕಾ ವೈದ್ಯರು ರೋಗಿಗಳಿಗೆ ತಕ್ಷಣ ಸ್ಪಂದಿಸುತ್ತಿಲ್ಲ ಎಂಬ ವಿಷಯ ಪ್ರಸ್ತಾಪವಾಗಿತ್ತು. ಈ ವೇಳೆ ಆಸ್ಪತ್ರೆಯ ವೈದ್ಯರಾದ ಡಾ. ಮಂಜುನಾಥ್ ಅವರು, “ಯಾವುದೇ ದೂರುಗಳಿದ್ದರೆ ನನ್ನ ಗಮನಕ್ಕೆ ತನ್ನಿ” ಎಂದು ಭರವಸೆ ನೀಡಿದ್ದರು. ಆದರೆ, ಅದರ ಬೆನ್ನಲ್ಲೇ ಆಗಸ್ಟ್ 5ರಂದು ಇಂತಹದ್ದೇ ಒಂದು ಘಟನೆ ಮರುಕಳಿಸಿದೆ.

ಮೂಲಭೂತ ಪರೀಕ್ಷೆಯಿಲ್ಲದೆ ಔಷಧಿ ನೀಡಿದ ವೈದ್ಯರು:  ಕೋಡಿಂಬಾಳದ ಪ್ರಕಾಶ್ ಎಂಬವರು ತೀವ್ರ ಜ್ವರ ಹಾಗೂ ದೈಹಿಕ ಆಯಾಸದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು. ಆದರೆ, ಕರ್ತವ್ಯದಲ್ಲಿದ್ದ ಕಲಿಕಾ ವೈದ್ಯರು ದೇಹದ ಉಷ್ಣಾಂಶವನ್ನು (ಜ್ವರ) ಅಳೆಯದೆ, ಸ್ಟೆಥಸ್ಕೋಪ್ ಬಳಸಿ ಉಸಿರಾಟ ಅಥವಾ ಎದೆಯ ಭಾಗವನ್ನು ಪರಿಶೀಲಿಸದೆ, ರೋಗಿ ಹೇಳಿದ ಲಕ್ಷಣಗಳ ಆಧಾರದ ಮೇಲೆಯೇ ಔಷಧಿಗಳನ್ನು ಬರೆದುಕೊಟ್ಟಿದ್ದಾರೆ.

kadaba times
kadaba times

DHO ಗಮನಕ್ಕೆ ತರುತ್ತಿದ್ದಂತೆಯೇ ಅಲರ್ಟ್:   ವೈದ್ಯಕೀಯ ತಪಾಸಣೆಯಲ್ಲಿ ಕಂಡುಬಂದ ಈ ಲೋಪವನ್ನು ಪ್ರಕಾಶ್ ಅವರು ತಕ್ಷಣವೇ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಗಳ (DHO) ಗಮನಕ್ಕೆ ತಂದರು. ಹಿರಿಯ ಅಧಿಕಾರಿಗಳಿಂದ ಆಸ್ಪತ್ರೆಗೆ ಮಾಹಿತಿ ತಲುಪುತ್ತಿದ್ದಂತೆಯೇ ಜಾಗೃತರಾದ ಆಸ್ಪತ್ರೆಯ ಸಿಬ್ಬಂದಿ, ತಕ್ಷಣವೇ ಎದೆಯ ಎಕ್ಸ್-ರೇ ಹಾಗೂ ರಕ್ತ ಪರಿಶೀಲನೆ ನಡೆಸಿದರು.ಪರೀಕ್ಷೆಯ ವರದಿಯಲ್ಲಿ ಎದೆಯಲ್ಲಿ ಸೋಂಕು (Chest Infection) ಹಾಗೂ ರಕ್ತದ ಪ್ರಮಾಣದಲ್ಲಿ ವ್ಯತ್ಯಾಸವಿರುವುದು ಪತ್ತೆಯಾಯಿತು. ತದನಂತರವಷ್ಟೇ  ಅಗತ್ಯವಿರುವ ಆಂಟಿಬಯೋಟಿಕ್, ಸಿರಪ್ ಹಾಗೂ ಸೂಕ್ತ ಔಷಧಿಗಳನ್ನು ನೀಡಿ ಚಿಕಿತ್ಸೆ ನೀಡಿದ್ದಾರೆ.

ಸಾಮಾನ್ಯ ರೋಗಿಗಳ ಗತಿಯೇನು?  “ಅರಿವಿರುವವರು ಅಥವಾ ಅಧಿಕಾರಿಗಳ ಜೊತೆ ಸಂಪರ್ಕ ಇರುವವರು ಪೋನಾಯಿಸಿ ಸಮಸ್ಯೆಯನ್ನು ತಿಳಿಸುತ್ತಾರೆ .  ಆದರೆ, ದಿನಂಪ್ರತಿ ಆಸ್ಪತ್ರೆಗೆ ಆಗಮಿಸುವ ಬಡ ಹಾಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕರ ಪರಿಸ್ಥಿತಿ ಏನು? ಸರಿಯಾದ ತಪಾಸಣೆ ಇಲ್ಲದೆ  ಚಿಕಿತ್ಸೆ ನೀಡಿದರೆ ಆಗುವ ಅನಾಹುತಕ್ಕೆ ಹೊಣೆ ಯಾರು?” ಎಂದು ಪ್ರಕಾಶ್ ಪ್ರಶ್ನಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೂ ಕನಿಷ್ಠ ಮೂಲಭೂತ ವೈದ್ಯಕೀಯ ತಪಾಸಣೆ ನಡೆಸಿ, ಕಟ್ಟುನಿಟ್ಟಿನ ನಿಯಮಾವಳಿಗಳಂತೆ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.

KADABA TIMES NEWS
KADABA TIMES NEWShttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಮಾಧ್ಯಮವಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ದ.ಕ ಜಿಲ್ಲೆಯ ಪ್ರಮುಖ ಸುದ್ದಿಗಳು, ರಾಜ್ಯ,ದೇಶದ ಮಹತ್ವದ ಘಟನಾವಳಿಗಳನ್ನು ಸ್ಥಳೀಯರಿಗೆ ತಲುಪಿಸುತ್ತದೆ. ನಮ್ಮನ್ನು ಬೆಂಬಲಿಸಿ ಮತ್ತು ಪ್ರೋತ್ಸಾಹಿಸಿ. ನಿಮ್ಮೂರಿನ ಸುದ್ದಿ ಮಾಹಿತಿಗಳನ್ನು +91 93804 74819 ಗೆ ವಾಟ್ಸಪ್ ಮಾಡಿ.

Related Articles

Latest Articles